ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ‘ಭೂಮಿ ಪೂಜನ್’ ಸಮಾರಂಭ ಆಗಸ್ಟ್ 5 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ. ಪ್ರಧಾನಮಂತ್ರಿ ಮಾತ್ರವಲ್ಲದೇ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಹಾಗೆಯೇ ಬಾಬರಿ ಮಸೀದಿ ವಿವಾದದ ಪ್ರಮುಖ ದಾವೆದಾರರಲ್ಲಿ ಒಬ್ಬರಾಗಿದ್ದ ಅನ್ಸಾರಿ ಅವರಿಗೆ ಮೊದಲ ಆಮಂತ್ರಣ ಪತ್ರವನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಟ್ರಸ್ಟ್ ಹಳದಿ ಬಣ್ಣದ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದು ಅದರಲ್ಲಿ ಕೆಂಪು ಅಕ್ಷರದಲ್ಲಿ ಬರೆಯಲಾಗಿದೆ. ಸುಮಾರು 200 ಮಂದಿಗೆ ಈ ಆಮಂತ್ರಣ ಪತ್ರವನ್ನು ಕಳುಹಿಸಲಾಗಿದೆ. ಸುಮಾರು 161 ಅಡಿ ಎತ್ತರದ ಭವ್ಯ ರಾಮ ಮಂದಿರದ ನಿರ್ಮಾಣ ಕಾಮಗಾರಿಯು ಸುಮಾರು 3 ರಿಂದ 3.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಭೂಮಿ ಪೂಜೆ ಕಾರ್ಯಕ್ರಮವು ಆಗಸ್ಟ್ 5 ರಂದು ನಡೆಯಲಿದ್ದು ಇಡೀ ನಗರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಸರಿ ಧ್ವಜಗಳು, ಪೋಸ್ಟರ್‌ಗಳಿಂದ ಅಲಂಕರಿಸಲಾಗಿದೆ. ಹಾಗೆಯೇ ಸಮಾರಂಭಕ್ಕೂ ಮೊದಲು ಸಿದ್ದತೆಗಳ ಪರಿಶೀಲನೆ ನಡೆಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ಕೊರೊನಾ ವೈರಸ್ ಕಾರಣದಿಂದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 200 ಆಹ್ವಾನಿತರನ್ನು ತಲಾ 50 ಜನರ ಬ್ಲಾಕ್‌ಗಳಲ್ಲಿ ಕೂರಿಸಲು ನಿರ್ಧರಿಸಿದೆ.
ಅಯೋಧ್ಯೆಯಲ್ಲಿ ಭೂಮಿ ಪೂಜನ್ ಕಾರ್ಯಕ್ರಮವು ‘ಗೌರಿ ಗಣೇಶ’ ಪೂಜೆಯೊಂದಿಗೆ ಆರಂಭವಾಗಲಿದೆ. ಈ ಕಾರ್ಯಕ್ರಮಕ್ಕಿಂತ ಹೆಚ್ಚಿನ ಶುಭ ಕಾರ್ಯಕ್ರಮ ಬೇರೊಂದು ಇರಲು ಸಾಧ್ಯವಿಲ್ಲ. ಗಣೇಶ ದೇವರ ಆಶೀರ್ವಾದದಿಂದ ಮಂದಿರ ನಿರ್ಮಾಣ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ಸಮಿತಿಯ ಮಹಾರಾಜ್ ಕನ್ಹಯ್ಯ ದಾಸ್ ಹೇಳಿದ್ದಾರೆ.