ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ‘ಮನೆಯಲ್ಲಿಯೇ ರಾಮನ ಪೂಜೆ ಮಾಡಿ, ಪಟಾಕಿ ಸಿಡಿಸದಿರಿ, ಸಂಭ್ರಮಾಚರಣೆ ಬೇಡ’ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ – ಕಹಳೆ ನ್ಯೂಸ್
ಮಂಗಳೂರು, ಆ. 04 : ”ಬುಧವಾರ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದ್ದು, ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿಯೇ ಪೂಜೆ ಮಾಡಿ, ಬೀದಿಯಲ್ಲಿ ಪೂಜೆ ಮಾಡಿ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವುದನ್ನು ಮಾಡಬೇಡಿ. ಅಯೋಧ್ಯೆಯಂತಹ ಸೂಕ್ಷ್ಮ ವಿಚಾರದಲ್ಲಿ ಯಾರ ಭಾವನೆಗೂ ಧಕ್ಕೆ ಉಂಟಾಗಬಾರದು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
”ಎಲ್ಲಾ ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಬೇಕು. ಗುಂಪು ಸೇರಿ ಸಂಭ್ರಮಾಚರಣೆ ಮಾಡಬೇಡಿ, ಪ್ರತಿ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ರಾಮಮಂದಿರದ ಭೂಮಿ ಪೂಜೆಯನ್ನು ಸಂಭ್ರಮಿಸಿ, ಬದಲಾಗಿ ಗುಂಪುಗೂಡಿ, ಪಟಾಕಿ ಸಿಡಿಸಬೇಡಿ. ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೀಪ ಬೆಳಗಿಸಿ” ಎಂದು ಮನವಿ ಮಾಡಿದ್ದಾರೆ.
”ಹಾಗೆಯೇ ಬುಧವಾರ ಬೆಳಿಗ್ಗೆ 8 ರಿಂದ 12 ರವರೆಗೆ ನಡೆಯಲಿರುವ ಈ ಕಾರ್ಯಕ್ರಮ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ, ಸಾಮಾಜಿಕ ಜಾಲತಾಣದಲ್ಲೂ ಲೈವ್ ಇರಲಿದೆ. ಅದರ ಮೂಲಕ ಜನರು ವೀಕ್ಷಿಸಬಹುದು” ಎಂದು ತಿಳಿಸಿದ್ದಾರೆ.