ಮೂಡಬಿದಿರೆ: ಕರಿಂಜೆ ಮುಕ್ತಾನಂದ ಸ್ವಾಮೀಜಿ ಸರಕಾರಿ ಜಾಗ ಕಬಳಿಸಿದ್ದಾರೆ, ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಮೂಡಬಿದಿರೆ ಶಾಸಕ ಅಭಯಚಂದ್ರ ಎಚ್ಚರಿಸಿದ್ದಾರೆ. ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮೂಡಬಿದಿರೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಕರಿಂಜೆ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನನ್ನು ರಾಕ್ಷಸ ಎಂದು ಸಭೆಯೊಂದರಲ್ಲಿ ಆರೋಪಿಸಿದ್ದಾರೆ.
” ನನ್ನನ್ನು ಟೀಕಿಸಿದರೆ ಪರ್ವಾಗಿಲ್ಲ ಆದರೆ ಮುಖ್ಯಮಂತ್ರಿಯನ್ನು ಬೈದರೆ ಅವರು ಯಾವ ಸ್ವಾಮೀಜಿಯಾದರು ಸುಮ್ಮನೆ ಬಿಡುವುದಿಲ್ಲ. ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದ್ದಾರೆ. ನನಗೆ ಶಾಸಕನಾಗುವ ಆಸೆಯಿಲ್ಲ, ಆದರೆ ಕಾರ್ಯಕರ್ತರ ರಕ್ಷಣೆಗಾಗಿ, ಪಕ್ಷ ಹಿತಕ್ಕಾಗಿ ಚಿಂತಿಸಬೇಕಾಗಿದೆ. ಕಾಂಗ್ರೆಸ್ ಗೆದ್ದು ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ” ಮೂಡಬಿದಿರೆಯಲ್ಲಿ ಕಾಂಗ್ರೆಸ್ ವಿರುದ್ಧ ಪಿತೂರಿ ನಡೆಸಿದವರಿಗೆ ಚುನಾವಣೆ ಬಳಿಕ ಉತ್ತರಿಸುವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಮಾತನಾಡಿ, ಪಕ್ಷದ ಕಾರ್ಯಕರ್ತರು ಎರಡು ತಿಂಗಳು ಸಂಘಟಿತರಾಗಿ ಕೆಲಸ ಮಾಡಿದರೆ ಮತ್ತೆ ಐದು ವರ್ಷ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನಕರ ಶೆಟ್ಟಿ, ಸಂಜೀವ ಮೊಯ್ಲಿ, ರುಕ್ಕಯ ಪೂಜಾರಿ , ಸುಪ್ರಿಯಾ ಡಿ. ಶೆಟ್ಟಿ, ರತ್ನಾಕರ ದೇವಾಡಿಗ, ವಿನೋದ್ ಸೆರಾವೋ, ಚಂದ್ರಹಾಸ ಸನಿಲ್, ಕೊರಗಪ್ಪ, ರಾಜೇಶ್ ಕೋಟೆಕಾರ್ ಉಪಸ್ಥಿತರಿದ್ದರು.