ಗುಡ್ಡ ಕಡಿದು ಕಟ್ಟಡ – ನಿರ್ಮಾಣ ಚಟುವಟಿಕೆಗಳಿಗಿಲ್ಲ ಅನುಮತಿ :-ದಕ್ಷಿಣ ಕನ್ನಡ ಡಿಸಿ ಸೂಚನೆ-ಕಹಳೆ ನ್ಯೂಸ್
ಅಪಾಯಕಾರಿ ಜಾಗಗಳಲ್ಲಿ ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ ಸೇರಿದಂತೆ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆ, ನೆರೆ ಸೇರಿದಂತೆ ಪ್ರಾಕೃತಿಕ ದುರ್ಘಟನೆಗಳು ನಡೆದಾಗ ಇಂತಹ ಸ್ಥಳಗಳಲ್ಲಿ ನಿರ್ಮಿಸಿದ ಕಟ್ಟಡಗಳೇ ಕುಸಿದು, ಜೀವಹಾನಿಗೂ ಕಾರಣವಾಗುತ್ತಿವೆ. ಗುಡ್ಡವನ್ನು ಅವೈಜ್ಞಾನಿಕವಾಗಿ ಕಡಿದು ಕಟ್ಟಡ ನಿರ್ಮಾಣ ಮಾಡುವ ಪ್ರವೃತಿ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಇವು ಹೆಚ್ಚು ಅಪಾಯಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ನಿರ್ಮಾಣ ಚಟುವಟಿಕೆಗೆ ಪರವಾನಿಗೆ ನೀಡದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆ ತೀವ್ರವಾಗುತ್ತಿದ್ದು, ಅಪಾಯಕಾರಿ ಮನೆ, ತಡೆಗೋಡೆ, ಕಟ್ಟಡ, ವಿದ್ಯುತ್ ಕಂಬಗಳನ್ನು ಗುರುತಿಸಿ ಅವುಗಳ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದೆ ತಲೆದೋರಬಹುದಾದ ಅಪಾಯಗಳನ್ನು ಕಂಡುಹಿಡಿದರೆ, ಅನಿರೀಕ್ಷಿತ ಘಟನೆಗಳನ್ನು ಯಶಸ್ವಿಯಾಗಿ ಎದುರಿಸಬಹುದಾಗಿದೆ. ಪರಿಹಾರ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಭವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ ವರ್ಷ ಅತಿವೃಷ್ಠಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿದರೂ, ಇನ್ನೂ ಮನೆ ಪೂರ್ತಿಯಾಗಿಲ್ಲದಿರುವುದು ಕಂಡುಬಂದಿದೆ. ಈ ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪರಿಹಾರ ಮೊತ್ತವನ್ನು ಸಕಾಲದಲ್ಲಿ ವಿತರಿಸುವಂತೆ ಸೂಚಿಸಿದರು.
ಮಳೆಗಾಲದಲ್ಲಿ ಡೆಂಗ್ಯೂ. ಚಿಕನ್‍ಗುನ್ಯಾ, ಇಲಿಜ್ವರದಂತಹ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಕೋವಿಡ್ ವ್ಯಾಪಿಸಿದ್ದರೂ, ಇತರೆ ಕಾಯಿಲೆಗಳ ನಿಯಂತ್ರಣಕ್ಕೂ ಆದ್ಯತೆ ನೀಡುವಂತೆ ಡಾ. ಕೆ.ವಿ. ರಾಜೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್, ಡಿಸಿಪಿ ಅರುಣಾಂಶ ಗಿರಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.