Recent Posts

Thursday, November 21, 2024
ಕೊಡಗುರಾಜ್ಯಸುದ್ದಿ

ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ ; ಎರಡು ಕಾರುಗಳು ಪತ್ತೆ, ಮುಂದುವರಿದ ಶೋಧಕಾರ್ಯ – ಕಹಳೆ ನ್ಯೂಸ್

ಮಡಿಕೇರಿ: ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಆರು ದಿನಗಳಾಗಿವೆ. ದುರಂತದಲ್ಲಿ ಐವರು ಭೂ ಸಮಾಧಿಯಾಗಿದ್ದಾರೆ. ಇದುವರೆಗೂ ಒಂದು ಮೃತ ದೇಹ ಮಾತ್ರ ಪತ್ತೆಯಾಗಿದೆ. ಇಂದು ಕೂಡ ಮೃತದೇಹ ಹುಡುಕುವ ಕಾರ್ಯಾಚರಣೆ ಮುಂದುವರಿಯಲಿದೆ.

ಕೊಡಗಿನಲ್ಲಿ ಸುರಿದ ಭಾರೀ ಮಳೆ ಪರಿಣಾಮ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದಿತ್ತು. ಪರಿಣಾಮ ಬೆಟ್ಟದಲ್ಲಿ ಮನೆ ಕೊಂಡಿದ್ದ ಅರ್ಚಕ ನಾರಾಯಣ್ ಆಚಾರ್ ಅವರ ಮನೆಯೂ ಈ ಬೆಟ್ಟದ ಮಣ್ಣಿನಲ್ಲಿ ಮುಚ್ಚಿ ಹೋಗಿ ಮನೆಯಲ್ಲಿದ್ದ ಅರ್ಚಕರು ಸೇರಿದಂತೆ ಐವರು ಮೃತಪಟ್ಟಿದ್ದರು. ಇದರಲ್ಲಿ ಓರ್ವರ ಶವ ಪತ್ತೆಯಾಗಿದೆ. ಉಳಿದ ನಾಲ್ವರ ಶವದ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ಕಾರ್ಯಾಚರಣೆಗೆ ಫಲ ಸಿಗುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆ ಕಡಿಮೆಯಾಗಿದ್ದರೂ ಕೂಡ ಮಂಜು ಆಗಾಗ ಆವರಿಸಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಹು ದೊಡ್ಡ ಮಟ್ಟದಲ್ಲಿ ಬೆಟ್ಟ ಕುಸಿದಿರುವ ಕಾರಣ ಮಣ್ಣು, ಕಲ್ಲಿನ ರಾಶಿ ದೊಡ್ದದಿದ್ದು, ಇದರ ಅಡಿಯಲ್ಲಿ ಮೃತದೇಹಗಳು ಸಿಲುಕಿವೆ. ಈ ಮಣ್ಣನ್ನು ತೆಗೆಯಲು ಎರಡು ಹಿಟಾಚಿ ಬಳಸಲಾಗಿದೆ.

ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ
ಈ ನಡುವೆ ಸೋಮವಾರ ಮೃತ ಅರ್ಚಕರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಬಂದವರು ನೇರವಾಗಿ ತಮ್ಮ ಮನೆಯಿದ್ದ ಜಾಗಕ್ಕೆ ಭೇಟಿ ನೀಡಿದರು. ಕಾರ್ಯಾಚರಣೆ ವೇಳೆ ಸಿಕ್ಕಿರುವ ಮನೆಯ ಸಾಮಾಗ್ರಿಗಳನ್ನು ನೋಡುತ್ತಾ ಮಕ್ಕಳು ಕಣ್ಣೀರಿಟ್ಟರು.

ದುರಂತಕ್ಕೆ ಮುನ್ನ ನಾರಾಯಣ ಆಚಾರ್ ಎರಡು ದಿನ ಬಿಟ್ಟು ಮನೆ ಖಾಲಿ ಮಾಡುವ ಚಿಂತನೆ ನಡೆಸಿದ್ದರು. ಮನೆಯಲ್ಲಿದ್ದ 30 ಕ್ವಿಂಟಾಲ್ ಕಾಳುಮೆಣಸು, 5 ಕ್ವಿಂಟಾಲ್‍ನಷ್ಟು ಏಲಕ್ಕಿ ಬಿಟ್ಟು ಹೋಗೋದು ಹೇಗೆ ಎಂಬ ಚಿಂತೆಯಲ್ಲಿದ್ದರು ಎಂದು ಅರ್ಚಕರ ಕಾರು ಚಾಲಕರಾಗಿದ್ದ ಜಯಂತ್ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜೆ. ಬೋಪಯ್ಯ ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಪರಿಶೀಲಿಸುತ್ತಿದ್ದಾರೆ. ಇಂದು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.

ಎರಡು ಕಾರುಗಳು ಪತ್ತೆ, ಮುಂದುವರಿದ ಶೋಧಕಾರ್ಯ

ಇಂದು ಕಾರ್ಯಾಚರಣೆ ವೇಳೆ ಒಂದು ಡಸ್ಟರ್ ಕಾರು ಮತ್ತು ಒಂದು ಅಂಬಾಸಡರ್ ಕಾರು ಪತ್ತೆಯಾಗಿದೆ. ಎರಡೂ ಕಾರುಗಳು ಜಖಂ ಗೊಂಡಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ತೆಗೆಯಲಾಯಿತು.

ಸೋಮವಾರದ ಕಾರ್ಯಾಚರಣೆಯ ವೇಳೆ ನಾರಾಯಣಾಚಾರ್ ಅವರ ಮನೆಯ ಕೆಲವು ಪಾತ್ರೆಗಳು, ಪೂಜಾ ಸಾಮಾಗ್ರಿಗಳು ಮತ್ತು ಬಟ್ಟೆಗಳು ಲಭ್ಯವಾಗಿತ್ತು. ನಾರಾಯಣಾಚಾರ್ ಅವರ ವಿದೇಶದಲ್ಲಿ ನೆಲೆಸಿದ್ದ ಪುತ್ರಿಯರು ಸೋಮವಾರ ಸ್ಥಳಕ್ಕೆ ಆಗಮಿಸಿದ್ದಾರೆ.