ಬೆಳ್ತಂಗಡಿ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ ; ಮನೆ ನಿರ್ಮಾಣಕ್ಕೆ 2ನೇ ಕಂತು 5 ಕೋ.ರೂ. ಶೀಘ್ರ ಬಿಡುಗಡೆ – ಕಹಳೆ ನ್ಯೂಸ್
ಬೆಳ್ತಂಗಡಿ: ಕಳೆದ ಬಾರಿ ಪ್ರವಾಹದಿಂದ ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳು ಹಾನಿಗೀಡಾಗಿದ್ದವು. ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಜಿಪಿಎಸ್ ಹಾಗೂ ತಾಂತ್ರಿಕ ತೊಂದರೆ ಉಂಟಾಗಿರುವುದನ್ನು ಸರಿಪಡಿಸಿ ಎರಡನೇ ಕಂತು 5 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದರು.
ದ.ಕ. ಜಿಲ್ಲಾಧಿಕಾರಿಯಾದ ಬಳಿಕ ಮೊದಲನೇ ಬಾರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಮಿತ್ತಬಾಗಿಲು ಕಾಳಜಿ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಜಿಪಿಎಸ್ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಂತ್ರಿಕ ತೊಂದರೆ ಜತೆಗೆ ಲೆಕ್ಕಪರಿಶೋಧನೆ ತಡವಾಗಿದ್ದರಿಂದ ಹೆಚ್ಚಿನ ಮಂದಿಗೆ ಎರಡನೇ ಕಂತು ಸಮಸ್ಯೆಯಾಗಿದೆ. ಪ್ರಸಕ್ತ ಜಿಪಿಎಸ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸರಕಾರದಿಂದ ರಾಜ್ಯಕ್ಕೆ 334 ಕೋ. ರೂ. ಬಿಡುಗಡೆಯಾಗಿದ್ದು, ಅದರಲ್ಲಿ ದ.ಕ. ಜಿಲ್ಲೆಗೆ 6 ಕೋ.ರೂ. ರಾಜೀವ್ ಗಾಂಧಿ ವಸತಿ ಯೋಜನೆ ಯೋಜನೆಯಡಿ ನೀಡಲಾಗಿದೆ. ಸದ್ಯ 5 ಕೋ.ರೂ. ಶೀಘ್ರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಮನೆ ನಿರ್ಮಾಣವಾಗದೆ ಬಾಡಿಗೆ ವಾಸದಲ್ಲಿ ರುವ ಮಂದಿಗೆ ಬಾಡಿಗೆ ವಿಸ್ತರಿಸುವ ಕುರಿತು ಪ್ರತಿಕ್ರಿಯಿಸಿ, ಅಂತಹ ಫಲಾನುಭವಿಗಳು ಮನವಿ ನೀಡಿದಲ್ಲಿ ಸರಕಾರದ ಗಮನಕ್ಕೆ ತಂದು ಬಾಡಿಗೆ ಸೌಲಭ್ಯ ವಿಸ್ತರಿಸುವ ಕುರಿತು ಚಿಂತಿಸ ಲಾಗುವುದು ಎಂದರು.
ನೇರವಾಗಿ ಕಾಳಜಿ ಪರಿಶೀಲನೆ
ಮಿತ್ತಬಾಗಿಲು ಗ್ರಾಮದ ಗಣೇಶ ನಗರದಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಮುಂಜಾಗ್ರತೆಯಾಗಿ ಸ್ಥಳಾಂತರಿತ ಕುಟುಂಬದ ಸುರಕ್ಷೆ ಮತ್ತು ಅವರೊಂದಿಗೆ ಮಾತನಾಡಲು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿ ನೂತನ ಜಿಲ್ಲಾಧಿಕಾರಿಗಳು ಇಲ್ಲಿರುವವರಿಗೆ ಸೂಕ್ತ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ., ತಾಲೂಕು ಆರೋಗ್ಯಧಿಕಾರಿ ಡಾ| ಕಲಾಮಧು, ಲೋಕೋಪಯೋಗಿ ಇಲಾಖೆ ಎಇಇ ಶಿವಪ್ರಸಾದ್ ಅಜಿಲ, ತಾ.ಪಂ. ಇಒ ಕುಸುಮಾಧರ್ ಬಿ., ಮಿತ್ತಬಾಗಿಲು ಪಿಡಿಒ ಜಯಕೀರ್ತಿ, ಕಂದಾಯ ನಿರೀಕ್ಷಕ ಪ್ರತೀಶ್ ಮೊದಲಾದವರು ಉಪಸ್ಥಿತರಿದ್ದರು.
ಚಾರ್ಮಾಡಿ ಸಂಚಾರಕ್ಕೆ ಮುಕ್ತ
ಮಳೆಯಿಂದಾಗಿ ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರ ಲಾಗಿತ್ತು. ಪ್ರಸಕ್ತ ರಸ್ತೆಯು ಸಂಚಾರಕ್ಕೆ ಮುಕ್ತವಾಗಿ ರುವುದರಿಂದ ಆ. 12ರಿಂದ ಮುಂಜಾನೆ 7ರಿಂದ ಸಂಜೆ 7ರ ವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.