ಭಾರತವು ಆತ್ಮ ನಿರ್ಭರ ಭಾರತದ ಕನಸನ್ನುಸಾಕಾರಗೊಳಿಸುತ್ತದೆ ಭಾರತೀಯರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ ; ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ನವದೆಹಲಿ: ಮಹಾಮಾರಿ ಕರೊನಾ ವೈರಸ್ ನಡುವೆಯೂ ರಾಷ್ಟ್ರವು ಇಂದು 74ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿದ್ದು, ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಮುನ್ನೆಚ್ಛರಿಕಾ ಕ್ರಮದೊಂದಿಗೆ ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಮೊದಲಿಗೆ ದೇಶದ ಸಮಸ್ತ ಜನತೆಗೆ ಶುಭಕೋರಿದ ಪ್ರಧಾನಿ ಮೋದಿ, ನಾವಿಂದು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಇದರ ಹಿಂದೆ ಲಕ್ಷಾಂತರ ಜನರ ತ್ಯಾಗವಿದೆ. ನಮ್ಮ ಸೇನೆ ಭಾರತ ಮಾತೆಯನ್ನು ರಕ್ಷಿಸುತ್ತಿದೆ. ವೀರರ ತ್ಯಾಗ ಬಲಿದಾನದಿಂದಾಗಿ ನಾವಿಂದು ಸಂಭ್ರಮ ಪಡುತ್ತಿದ್ದೇವೆ ಎಂದು ದೇಶಕ್ಕೆ ಸ್ವತಂತ್ರ ತಂದುಕೊಟ್ಟವರನ್ನು ಮೊದಲು ಸ್ಮರಿಸಿದರು.
ಇವತ್ತು ಕರೊನಾ ವಿಶೇಷ ಪರಿಸ್ಥಿತಿ ತಂದಿದೆ. ಕರೊನಾ ವಾರಿಯರ್ಸ್ ಸುದೀರ್ಘ ಸಮಯದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಧರ್ಮ ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಮೋದಿ, ಕರೊನಾ ನಡುವೆ ದೇಶವು ಅನೇಕ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಂತಾಗಿದೆ. ದೇಶದ 130 ಕೋಟಿ ಜನರ ಸಂಕಲ್ಪದಿಂದಾಗಿ ಕರೊನಾವನ್ನು ಜಯಸಿದ್ದೇವೆ ಎಂದರು.
ಪೂಜ್ಯ ಬಾಪೂಜಿ ನೇತೃತ್ವದಲ್ಲಿ ಹೋರಾಟ ಯಶಸ್ವಿಯಾಗಿದೆ. ಸಾಮ, ದಂಡ, ಭೇದದ ಮೂಲಕ ಸ್ವತಂತ್ರ ಗಳಿಸಲಾಗಿದೆ. ಇಡೀ ದೇಶ ಒಗ್ಗೂಡುವುದಿಲ್ಲ ಎನ್ನುವವರಿಗೆ ಹಿನ್ನೆಡೆಯಾಯ್ತು. ಇಡೀ ದೇಶ ಒಗ್ಗೂಡಿ ಮುಂದೆ ಬಂದಾಗ ಅವರಿಗೆ ಸೋಲಾಯ್ತು. ನಾವಿಲ್ಲಿ ರಾಜ್ಯಭಾರ ಮಾಡಲು ಬಂದಿದ್ದೇವೆ ಎಂದವರಿಗೆ ಸೋಲಾಯ್ತು. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು.
ಕರೊನಾ ವಿರುದ್ಧವೂ ಭಾರತ ತನ್ನ ಸಾಮೂಹಿಕ ಶಕ್ತಿಯನ್ನು ತೋರಿದೆ. ಭಾರತದ ಪ್ರತಿಯೊಬ್ಬರಿಗೂ ಆತ್ಮನಿರ್ಭರ ಮಂತ್ರವಾಗಿದೆ. ಕರೊನಾ ಸಂದರ್ಭದಲ್ಲೂ ಆತ್ಮನಿರ್ಭರ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಭಾರತ ಒಂದು ಬಾರಿ ನಿರ್ಧಾರ ಕೈಗೊಂಡರೆ, ಸಾಧಿಸಿಯೇ ತೀರುತ್ತದೆ. ಈ ದಿಶೆಯಲ್ಲಿ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯುವಶಕ್ತಿಯನ್ನು ಹೊಂದಿರುವ ಭಾರತದ ಮೊದಲ ಮಂತ್ರ ಆತ್ಮನಿರ್ಭರ ಆಗಿದೆ ಎಂದು ಹೇಳಿದರು.
ಇದೇ ವೇಳೆ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಸಹ ಎರಡು ಯುದ್ಧಗಳಲ್ಲಿ ಹಿನ್ನೆಡೆ ಕಂಡಿದ್ದಾರೆ. ವಿಸ್ತಾರವಾದಕ್ಕೆ ಸವಾಲಾಗಿದ್ದೇ ಭಾರತ ದೇಶ. ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಎಂದಿಗೂ ಉನ್ನತಿ ಕಾಣಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಭಾರತ ಆತ್ಮನಿರ್ಭರ ಆಗಬೇಕಿದೆ. ಆತ್ಮನಿರ್ಭರ ಭಾರತ ಕೃಷಿ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದೆ. ದೇಶದ ಹೊಟ್ಟೆಯನ್ನು ನಮ್ಮ ರೈತರು ತುಂಬಿಸುತ್ತಿದ್ದಾರೆ. ಅಲ್ಲದೆ, ಜಗತ್ತಿಗೂ ನಮ್ಮ ರೈತರ ಕೊಡುಗೆ ಇದೆ ಎಂದರು. ಇದೇ ವೇಳೆ ವೋಕಲ್ ಫಾರ್ ಲೋಕಲ್ ಮತ್ರ ಜಪಿಸಿದ ಮೋದಿ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಸ್ಥಳೀಯ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯರಿಗೆ ಬೆಂಬಲ ನೀಡಿ ಎಂದರು.
ದೇಶದಲ್ಲಿ ಸಾಕಷ್ಟು ಬದಲಾವಣೆ ವೇಗವಾಗಿ ಜಾರಿಗೆ ಬರುತ್ತಿವೆ. ಬ್ಯಾಂಕ್ಗಳ ವಿಲೀನ, ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ರೈತರ ಎಪಿಎಂಸಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸಿರಲಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶಗಳು ಸಿಗುವುದನ್ನು ನಾನು ನಿರೀಕ್ಷಿಸಿರಲಿಲ್ಲ. ದೇಶದ ಆರ್ಥಿಕತೆಯನ್ನು ಮೇಲೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವೂ ನಡೆಯುತ್ತಿದೆ. ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಭಾರತ ಮುಂದಿದೆ. ಅನೇಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.
ಇಂದು ಕೃಷಿ ಕ್ಷೇತ್ರ ಆಧುನೀಕರಣ ಆಗುತ್ತಿದೆ. ಹಲವೆಡೆ ಸೋಲಾರ್ ಘಟಕಗಳನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ತನ್ನ ಗುರಿ ಸಾಧಿಸಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ದೊರೆಯುತ್ತದೆ. ಕಾಡಿನಲ್ಲಿ ದೂರ ದೂರ ವಾಸಿಸುವವರಿಗೂ ಇದರ ಸೌಲಭ್ಯ ಲಭ್ಯವಾಗಿದೆ. ಶುದ್ಧ ನೀರುವ ಸಿಗುತ್ತಿರುವುದರಿಂದ ರೋಗಗಳು ಕಡಿಮೆಯಾಗುತ್ತವೆ. ದೂರದೂರುಗಳಿಂದ ನಗರಗಳಿಗೆ ವಲಸೆ ಬರುವವರಿಗೆ ವಸತಿ ಯೋಜನೆ ಕಲ್ಪಿಸಲಾಗಿದೆ. ಮನೆ ಕಟ್ಟಿಕೊಳ್ಳಬೇಕೆಂಬ ಮಧ್ಯಮ ವರ್ಗದ ಜನರ ಕನಸು ವಸತಿ ಯೋಜನೆಯ ಮೂಲಕ ನನಸಾಗುತ್ತಿದೆ ಎಂದರು.
ಆತ್ಮನಿರ್ಭರ ಭಾರತ ಸಮರ್ಥ ಭಾರತ ಮಂತ್ರ ಜಪಿಸಿದ ಪ್ರಧಾನಿ ಮೋದಿ, ಡಿಜಿಟಲ್ ಭಾರತದ ಜನರಲ್ಲಿ ಅದ್ಭುತವನ್ನು ಸೃಷ್ಟಿಸಿದೆ. ಭೀಮ್, ಯುಪಿಐ ಆಯಪ್ಗಳು ಮೂರು ಲಕ್ಷ ಕೋಟಿ ವಹಿವಾಟು ನಡೆಸಿವೆ. ಡಿಜಿಟಲ್ ಇಂಡಿಯಾ ಜತೆ ಗ್ರಾಮ ಪಂಚಾಯಿತಿಗಳ ಜೋಡಣೆ ಅನಿವಾರ್ಯ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ಸಿಗಲಿದೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ದೊರಕಿದೆ ಎಂದು ತಿಳಿಸಿದರು.