“ಕೊತ್ತಂಬರಿ, ಕರಿಬೇವು ತರಲು ಹೋದವರ ಎಲ್ಲಾ ಲಿಸ್ಟ್ ಇದೆ..” ಎಂದು ಆರ್. ಅಶೋಕ್ ವ್ಯಂಗ್ಯ ; SDPI ಹಾಗೂ PFI ಬ್ಯಾನ್ ಗೆ ಚಿಂತನೆ..? – ಕಹಳೆ ನ್ಯೂಸ್
ಬೆಂಗಳೂರು: ಕೆ.ಜಿ ಹಳ್ಳಿ ಪ್ರಕರಣ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅಶೋಕ್, ಡಿ.ಕೆ ಶಿವಕುಮಾರ್ ಗೃಹ ಸಚಿವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದ್ರೆ ಸಾಲದು, ಕ್ಷಮೆ ಕೇಳಬೇಕು ಎಂದರು.
ಇದು ತ್ರಿಕೋನ ಫೈಟ್
ಎಸ್‌ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ತ್ರಿಕೋನ ಫೈಟ್. ಕೊಲೆಯಾದ್ರೆ, ತಿದ್ದುಕೊಳ್ಳಲು ಅವಕಾಶವಿದೇಯೆ? ಎಂದು ಅಶೋಕ್ ಪ್ರಶ್ನಿಸಿದ್ರು. ಕಾಂಗ್ರೆಸ್ ನಾಯಕರು ಈ ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪಿನ ಕಥೆ ಬಿಡಬೇಕು. ಮೂವರನ್ನೂ ಕರೆದು ಮಾತನಾಡಬೇಕಿತ್ತು. ಬೆಂಗಳೂರಿಗೆ ಇದೊಂದು ದೊಡ್ಡ ಕಪ್ಪುಚುಕ್ಕೆಯಾಯ್ತು. ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಈಗಲೇ ಗಲಾಟೆಯಾಯ್ತು. ಇದರಿಂದ ಬೆಂಗಳೂರು ಬೆಚ್ಚಿಬಿದ್ದಿದೆ ಎಂದರು.
ಬೆಂಗಳೂರಿಗೆ ಕಪ್ಪುಚುಕ್ಕೆ ತಂದಿದ್ದು ಕಾಂಗ್ರೆಸ್‌ನವರು. ಗೃಹ ಸಚಿವರನ್ನು ಏಕವಚನದಲ್ಲಿ ನಿಂದನೆ ಮಾಡಿದ್ದು ಸರಿಯಲ್ಲ. ರಾಜಕೀಯದಲ್ಲಿ ಬಹಳ ಆಸೆ ಇಟ್ಟುಕೊಂಡಿದ್ದೀರಿ. ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇರುವವರು. ಇದು ನಿಮ್ಮ ರಾಜಕೀಯಕ್ಕೆ ಒಂದು ಹಂಪ್ ಆಗುತ್ತೆ. ನಿಮಗೆ ಹಿನ್ನಡೆಯಾಗುತ್ತದೆ. ಇದಕ್ಕೆ ನೀವು ಹೇಳಿಕೆ ಕೊಟ್ಟಾಗಲೇ ಇತಿಶ್ರೀ ಹಾಡಬಹುದಾಗಿತ್ತು. ಒಂದೆರಡು ದಿನಗಳ ಬಳಿಕ ವಿಷಾದ ವ್ಯಕ್ತಪಡಿಸಿದ್ದೀರಿ. ವಿಷಾದ ಅಲ್ಲ, ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸುತ್ತೇನೆ. ಮೊದಲು ಕಾಂಗ್ರೆಸ್‌ನವರು ಎಸ್‌ಡಿಪಿಐ, ಕಾರ್ಪೋರೇಟರ್ ಹಾಗೂ ಶಾಸಕರನ್ನು ಕರೆದು ಮಾತುಕತೆ ಮಾಡಲಿ ಎಂದು ಹೇಳಿದ್ರು.
ಹೊಸ ಮನೆ ಕಟ್ಟಿಸಿಕೊಡುತ್ತೇವೆ ಅಂದ್ರೆ, ಸುಟ್ಟು ಹೋಗಿರುವ ಮನೆ ಬರುತ್ತಾ?
ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖ ಬಟಾ ಬಯಲಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಮತ್ತು ಸ್ಥಳೀಯರ ಜೊತೆ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಪ್ರಸನ್ನ ಕುಮಾರ್ ಹೇಳಿದ್ದಾರೆ. ಈಗ ಕಾಂಗ್ರೆಸ್ ಒಳ ರಾಜಕೀಯವೇ ಗಲಭೆಗೆ ಕಾರಣ ಎನ್ನೋದು ಬಯಲಾದಂತಾಗಿದೆ. ಜಮೀರ್ ಈಗ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಅಂದ್ರೆ, ಅಖಂಡ ಶ್ರೀನಿವಾಸಮೂರ್ತಿ ಸುಟ್ಟು ಹೋಗಿರುವ ಮನೆ ಬರುತ್ತಾ? ಶ್ರೀನಿವಾಸಮೂರ್ತಿ ಕುಟುಂಬದವರು ಕಟ್ಟಿಸಿದ ಮನೆ ಅದಾಗಿತ್ತು. ಈಗ ಜಮೀರ್ ಆ ಭಾವನೆಯುಳ್ಳ ಮನೆ ಕಟ್ಟಿಸಿಕೊಡುತ್ತಾರಾ? ಎಂದು ಅಶೋಕ್ ಪ್ರಶ್ನಿಸಿದ್ರು. SDPI ಬ್ಯಾನ್ ಮಾಡೋಕೆ ಬೇಕಾದ ಎಲ್ಲಾ ವರದಿ ರೆಡಿ ಮಾಡುತ್ತಿದ್ದೇವೆ. 20 ಕೊಲೆಗಳಲ್ಲಿ SDPI ಕೈವಾಡ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅದೆಲ್ಲಾ ವರದಿ ಮಾಡಿ, ಬ್ಯಾನ್ ಮಾಡುವುದಕ್ಕೆ ವರದಿ ಸಿದ್ಧವಾಗುತ್ತಿದೆ ಎಂದು ತಿಳಿಸಿದ್ರು. “ಕಾಂಗ್ರೆಸ್ ಮತ್ತು SDPI ಒಂದೇ ನಾಣ್ಯದ ಎರಡು ಮುಖ” ಎಂದು ಇದೇ ವೇಳೆ ಗುಡುಗಿದ್ರು.
“ಕೊತ್ತಂಬರಿ, ಕರಿಬೇವು ತರಲು ಹೋದವರ ಎಲ್ಲಾ ಲಿಸ್ಟ್ ಇದೆ..”
ಪೊಲೀಸ್ ಮೇಲೆ ಕಾಂಗ್ರೆಸ್ ಮಾಡುವ ಆರೋಪ ಸರಿಯಲ್ಲ. ಯಾರು ಯಾರು ಕೊತ್ತಂಬರಿ, ಕರಿಬೇವಿನ ಸೊಪ್ಪು ತರುವುದಕ್ಕೆ ಹೋದವರ? ಎಲ್ಲಾ ಲಿಸ್ಟ್ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ ಕರಿಬೇವಿನ ಸೊಪ್ಪು ಇದೆ ಅಂತ ನಮ್ಮ ಬಳಿ ಮಾಹಿತಿ ಇದೆ ಎಂದು ಅಶೋಕ್ ವ್ಯಂಗ್ಯವಾಡಿದ್ರು.
ಶಾಸಕರ ತಾಯಿಯ ತಾಳಿ ಸುಟ್ಟು ಹೋಗಿದೆ. ಅದನ್ನ ಕೊಡಲಿಕ್ಕೆ ನಿಮ್ಮಿಂದ ಆಗುತ್ತಾ? ಎಂದು ಜಮೀರ್ ಅಹ್ಮದ್ ಅವರಿಗೆ ಅಶೋಕ್ ತಿರುಗೇಟು ಕೊಟ್ಟರು. ಕೊತ್ತಂಬರಿ ಸೊಪ್ಪು ರಾತ್ರಿ ಒಂದು ಗಂಟೆಗೆ ಸಿಗುತ್ತಾ? ಕಾಂಗ್ರೆಸ್‌ನವರು ಕೊತ್ತಂಬರಿ, ಕರಿಬೇವು ಸೊಪ್ಪು ಕತೆ ಬಿಡಿ. ಕಾರಣ ಇಲ್ಲದೇ ನಡೆದ ಘಟನೆ ಇದು. ಕಾಂಗ್ರೆಸ್‌ನ ಒಳ ಜಗಳದ ದಳ್ಳೂರಿಯಿಂದಾಗಿ ಗಲಭೆ ನಡೆದು ಬೆಂಗಳೂರಿಗೆ ಕಪ್ಪುಚುಕ್ಕೆ ಮಾಡುವ ಹಾಗಾಯಿತು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ SDPI- PFI ಬ್ಯಾನ್ ಮಾಡುವ ಬಗ್ಗೆ ಮಾತಾಡುತ್ತಿಲ್ಲ. ನಾವು ಬ್ಯಾನ್ ಮಾಡಿ ಅಂತಾ ಹೇಳುತ್ತಿದ್ದೇವೆ ಎಂದರು.
ಅಖಂಡ ಶ್ರೀನಿವಾಸಮೂರ್ತಿಯನ್ನ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ
ಅಖಂಡ ಶ್ರೀನಿವಾಸಮೂರ್ತಿಯನ್ನ ಸೆಳೆಯಲು ಬಿಜೆಪಿ ಒತ್ತಡ ಹಾಕ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಶ್ರೀನಿವಾಸಮೂರ್ತಿ ಅವರನ್ನು ಬಿಜೆಪಿಗೆ ಕರೆಯೋದೇ ಇಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ತಹ ಪರಿಸ್ಥಿತಿಯೂ ಈಗ ಇಲ್ಲ. ಅವರ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ರು.