ಮಂಗಳೂರು: ಕೇಂದ್ರ ಮಾರುಕಟ್ಟೆ ಬಂದ್ – ‘ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ’ – ಡಿಸಿ ರಾಜೇಂದ್ರ-ಕಹಳೆ ನ್ಯೂಸ್
ಕೊರೊನಾ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ಕೇಂದ್ರ ಮಾರುಕಟ್ಟೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಹಾಗೆಯೇ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದವರು ಸದ್ಯ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ಪ್ರಸ್ತುತ ವರ್ತಕರು ವ್ಯಾಪಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿರುತ್ತದೆ. ಕೊರೊನಾದ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ. ಕೊರೊನಾ ಸಂಬಂಧ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆಗಸ್ಟ್ 17 ರಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ರಸ್ತೆಗಳು ಇಕ್ಕಟ್ಟಿನಿಂದ ಕೂಡಿದ್ದು, ವಾಹನ ದಟ್ಟನೆ ಮತ್ತು ಜನದಟ್ಟನೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ, ಟ್ರಾಫಿಕ್ ಸಂಚಾರ ನಿಯಂತ್ರಣ ಕೂಡಾ ಕಷ್ಟಕರವಾಗಿದೆ. ಈ ಮಾರುಕಟ್ಟೆಯು ಇಕ್ಕಟ್ಟಿನ ಪ್ರದೇಶವಾಗಿದ್ದು, ಕೊರೊನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಥಳದ ಕೊರತೆಯಿಂದಾಗಿ ವಾಹನ ನಿಲುಗಡೆ ಕಷ್ಟವಾಗುತ್ತದೆ. ರಾಜ್ಯ, ಅಂತರ್ ರಾಜ್ಯ, ಜಿಲ್ಲೆ, ಅಂತರ್ ಜಿಲ್ಲೆಗಳಿಂದ ಹಣ್ಣು ಹಂಪಲು, ತರಕಾರಿ ಮೊದಲಾದ ನೂರಾರು ವಾಹನಗಳು ಬಂದು ಹೋಗುತ್ತದೆ. ಇಲ್ಲಿ 1500 – 2000 ದಷ್ಟು ಹಮಾಲರು, ವ್ಯಾಪಾರಸ್ಥರು ಇದ್ದು ಇಕ್ಕಟ್ಟಿನ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೊರೊನಾ ಸೋಂಕು ಶೀಘ್ರವೇ ಹರಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಾಗೆಯೇ ಇಲ್ಲಿ ಗ್ರಾಹಕರು, ಕಾರ್ಮಿಕರು, ಮಾಲೀಕರು ಮಾಸ್ಕ್ ಅಥವಾ ಫೇಸ್ ಶೀಲ್ಡ್‌ಗಳನ್ನು ಧರಿಸುವುದು ಕಂಡು ಬರುತ್ತಿಲ್ಲ. ಬೆರಳೆಣಿಕೆಯ ಮಂದಿ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಇನ್ನು ಕೇಂದ್ರ ಮಾರುಕಟ್ಟೆಯಲ್ಲಿ ಮಾಂಸದ ಅಂಗಡಿಗಳಿಗೆ ಸಮರ್ಪಕವಾದ ವ್ಯವಸ್ಥೆಯಿಲ್ಲದೇ ಇರುವುದರಿಂದ ಶುಚಿತ್ವವನ್ನು ಕಾಪಾಡುವುದು ಕಷ್ಟಕರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.