ಪುಷ್ಪಕ ವಿಮಾನ ಸಿನಿಮಾದಲ್ಲಿ ಭಿಕ್ಷುಕನ ಬಳಿ ಸಾವಿರಾರು ನೋಟುಗಳು ಪತ್ತೆಯಾದಂತೆ ಬೆಂಗಳೂರಿನಲ್ಲೊಂದು ಘಟನೆ ವರದಿಯಾಗಿದ್ದು, ಅಂಗವಿಕಲ ಭಿಕ್ಷುಕನ ಬಳಿಯ ಬಟ್ಟೆ ಗಂಟಿಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ನೋಟುಗಳು ಪತ್ತೆಯಾಗಿವೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಅಂಗವಿಕಲ ಭಿಕ್ಷುಕನ ಬಳಿಯಿದ್ದ ಕೊಳಕು ಬಟ್ಟೆಯನ್ನು ಸಾರ್ವಜನಿಕರು ಎಸೆಯಲು ಹೋದಾಗ ನೋಟುಗಳು ಪತ್ತೆಯಾಗಿವೆ.
ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ ಹಣ ಹಾಗೂ ಅಂಗವಿಕಲ ವೇತನವನ್ನೂ ಬಳಸದೆ ಹಣವನ್ನು ಕೂಡಿಟ್ಟಿದ್ದು, ಸುಮಾರು 60 ಸಾವಿರ ರೂ. ಗಂಟಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಹಲವು ತಿಂಗಳುಗಳಿಂದ ಸಾನ್ನವಿಲ್ಲದೇ ಕೊಳಕು, ಹರಿದ ಬಟ್ಟೆಯಲ್ಲಿಯೇ ಜೀವನ ನಡೆಸುತ್ತಿದ್ದ ರಂಗಸ್ವಾಮಿ ಬಳಿ ಇದ್ದ ಬಟ್ಟೆ ಗಂಟನ್ನು ಎಸೆಯುವ ಸಂದರ್ಭದಲ್ಲಿ ಹಣ ಪತ್ತೆಯಾಗಿತ್ತು. ಇಷ್ಟು ದಿನ ಗ್ರಾಮಸ್ಥರು ಆತನಿಗೆ ಊಟ ನೀಡುತ್ತಿದ್ದರು. ಸದ್ಯ ರಂಗಸ್ವಾಮಯ್ಯನ ಹಣವನ್ನು ಗ್ರಾಮಸ್ಥರು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಹಣ ದುರ್ಬಳಕೆ ಆಗುವುದನ್ನು ತಡೆಯುವ ಚಿಂತನೆ ನಡೆಸಿದ್ದಾರೆ. ಅಲ್ಲದೇ ಅನಾಥಾಶ್ರಮಕ್ಕೆ ಸೇರಿಸುವ ಯೋಚನೆಯನ್ನು ಮಾಡಿದ್ದಾರೆ.