ಮಂಗಳೂರು: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ವೃದ್ದೆಯೊಬ್ಬರು 12 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಮೃತದೇಹ ಪಡೆಯಲು ₹5 ಲಕ್ಷ ಬಿಲ್ ಪಾವತಿಸುವಂತೆ ಆಸ್ಪತ್ರೆಯ ಅಧಿಕಾರಿಗಳು ಬಡಪಾಯಿ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ದೂರಿದ್ದಾರೆ.
ಇದರಿಂದ ಕಂಗಾಲಾದ ಕುಟುಂಬ ರಾಜಕಾರಣಿಗಳಿಂದ ಒತ್ತಡ ಹಾಕಿಸಿದ ಮೇಲೆ ಬಿಲ್ ಮೊತ್ತ ₹3 ಲಕ್ಷಕ್ಕೆ ಇಳಿದಿದೆ. ತಕ್ಷಣಕ್ಕೆ ಅಷ್ಟು ಹಣ ಇಲ್ಲ ಎಂದಿದ್ದಕ್ಕೆ, ಆಸ್ಪತ್ರೆಯವರು ‘ಅಲ್ಲಿಯವರಗೆ ಹೆಣ ಇಲ್ಲ’ ಎಂದು ಹೇಳಿದ್ದಾರೆ. ಕೊನೆಗೆ ಡಿವೈಎಫ್‌ಐ ಮುಖಂಡರು, ಜಿಲ್ಲಾ ಆರೋಗ್ಯ ಅಧಿಕಾರಿ, ಸ್ಥಳೀಯ ಪೊಲೀಸ್ ಠಾಣೆಗೆ ‘ಹೆಣದ ಅಕ್ರಮ ಬಂಧನ’ದ ಕುರಿತು ಮೌಖಿಕ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ‘ದೂರು ನೀಡಿ, ಹೆಣ ಕೊಡಿಸುತ್ತೇವೆ’ ಎಂದು ಹೇಳಿದ್ದು, ಪಾಂಡೇಶ್ವರ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಪೊಲೀಸ್, ಮಾಧ್ಯಮಗಳಿಗೆ ದೂರು ನೀಡಲು ಮೃತರ ಕುಟುಂಬಸ್ಥರೂ ಭಯದಿಂದ ಹಿಂಜರಿದಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಕೆಲವರು ಮಧ್ಯ ಪ್ರವೇಶಿಸಿದ ಮೇಲೆ ಕುಟುಂಬದವರ ಕೈಯಲ್ಲಿದ್ದ ₹1.25 ಲಕ್ಷ ಪಡೆದು, ಬಾಕಿ ಹಣಕ್ಕೆ ಒಂದಿಷ್ಟು ಸಮಯಾವಾಕಾಶ ನೀಡಿ ಮೃತದೇಹವನ್ನು ಕುಟುಂಬದವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದು ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಆರೋಗ್ಯದ ವಿಷಯದಲ್ಲಿ ನಡೆಸುತ್ತಿರುವ ದಂಧೆ ಹಾಗೂ ಹೆಣಗಳ ವ್ಯಾಪಾರವಾಗಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ನಿದ್ರೆ ಮಾಡುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.