Sunday, January 19, 2025
ಬೆಂಗಳೂರು

‘ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ ಅನುಷ್ಠಾನ’ – ಕಹಳೆ ನ್ಯೂಸ್

ಬೆಂಗಳೂರು: ‘ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯಸರ್ಕಾರ ಬದ್ಧವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ರಾಜ್ಯವನ್ನು ಅಗ್ರಸ್ಥಾನಕ್ಕೆ ತರಲು ಎಲ್ಲರೂ ಶ್ರಮಿಸಬೇಕು’ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು ವಿಶ್ವವಿದ್ಯಾಲಯವು ಆಯೋಜಿಸಿದ್ದ ಐದು ದಿನಗಳ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಅತ್ಯಾಧುನಿಕ ಆವಿಷ್ಕಾರ, ತಂತ್ರಜ್ಞಾನಗಳಿಗೆ ತಕ್ಕಂತೆ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿರುವ ಎನ್‌ಇಪಿ ರೂಪಿಸಲಾಗಿದೆ. ಈ ನೀತಿಯನ್ನು ಅನುಷ್ಠಾನಕ್ಕೆ ತರುವ ಮೊದಲ ರಾಜ್ಯ ಕರ್ನಾಟಕ ಎನಿಸಿಕೊಳ್ಳಲಿದೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕಲಿಸಲು ಹೊಸ ಕಲಿಕಾ ಕಾರ್ಯಕ್ರಮವನ್ನು ರೂಪಿಸಲಾಗುವುದು. ಮಗುವಿನಲ್ಲಿರುವ ಕಲಿಕಾ ಸಾಮರ್ಥ ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಹೋಂ ವರ್ಕ್ ಹೊರೆಯನ್ನು ತೊಡೆದುಹಾಕಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್, ‘ಈ ಕಾರ್ಯಾಗಾರದಲ್ಲಿ ಅನೇಕ ತಜ್ಞರು ಅತ್ಯುತ್ತಮವಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಕ್ರೋಡೀಕರಿಸಿ, ಶಿಕ್ಷಣ ಇಲಾಖೆಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್. ಆರ್. ಶೆಟ್ಟಿ, ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮ ಅವರು ಶಿಕ್ಷಣದಲ್ಲಿ ಉದಾರ ಕೊಡುಗೆ ವಿಷಯ ಕುರಿತು ಮಾತನಾಡಿದರು.

ಯುಜಿಸಿ ಸದಸ್ಯರಾದ ಎಂ.ಕೆ. ಶ್ರೀಧರ್, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ರಿಷಿಕೇಶ್, ಬಯೋಕಾನ್‌ ಫೌಂಡೇಷನ್ ಮುಖ್ಯಸ್ಥೆ ಪ್ರತಿಮಾರಾವ್ ಉಪಸ್ಥಿತರಿದ್ದರು. 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಆನ್ ಲೈನ್ ಮೂಲಕ ಭಾಗವಹಿಸಿದ್ದರು. ಪ್ರೊ.ಬಿ.ಕೆ. ರವಿ ಸ್ವಾಗತಿಸಿದರು. ಪ್ರೊ.ದೀಪಾ ಶೆಣೈ ಪಿ. ವಂದಿಸಿದರು.