ಕೊಯಿಲಾ ಜಾನುವಾರು ಕೇಂದ್ರಕ್ಕೆ ಪ್ರವಾಸಿಗರ ಉಪಟಲ; ಮೂಕ ಪ್ರಾಣಿಗಳ ಪ್ರಾಣಕ್ಕೆ ಕುತ್ತಾಗುತ್ತಿದೆ ಮೋಜು – ಕಹಳೆ ನ್ಯೂಸ್
ಪುತ್ತೂರು: ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಕಾಗುವುದಿಲ್ಲ. ಹೌದು ಪ್ರಕೃತಿಯು ರಮಣೀಯ ದೃಶ್ಯಕಾವ್ಯವನ್ನು ಬರೆದ ತಾಣವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಒಳನೋಟ ಇದಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಂದಾಗಿ ಈ ಪ್ರಕೃತಿಯ ಸೌಂದರ್ಯಕ್ಕೆ ಕೊಡಲಿ ಏಟು ಬೀಳುತ್ತಿದೆ. ಕೇಂದ್ರದ ಜಾನುವಾರುಗಳು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಸಾವನ್ನಪ್ಪುವ ವಿದ್ಯಮಾನಗಳೂ ನಡೆಯಲಾರಂಭಿಸಿದೆ.
ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಸುಂದರ ದೃಶ್ಯಗಳನ್ನು ಆಸ್ಪಾದಿಸಲು ಇಲ್ಲಿಗೆ ನೂರಾರು ಸಂಖ್ಯೆಯ ಪ್ರಕೃತಿ ಪ್ರೇಮಿಗಳು ಭೇಟಿ ನೀಡುತ್ತಾರೆ. ಗಗನ ಚುಂಬಿಸುವ ಬೆಟ್ಟಗಳ ನಡುವೆ ಹಸಿರ ಹೊದಿಕೆಯಂತೆ ಕಂಗೊಳಿಸುವ ಈ ಪ್ರದೇಶ ಸಾವಿರಾರು ಸಂಖ್ಯೆಯ ಜಾನುವಾರುಗಳಿಗೆ ಮೇವನ್ನು ಉಣಿಸುತ್ತದೆ. ಹಿಂದಿನ ವಿಂಡೋಸ್ ನಲ್ಲಿ ಕಾಣಸಿಗುತ್ತಿದ್ದ ಪ್ರಕೃತಿಯ ಚಿತ್ರದಂತೆಯೇ ಈ ಕೊಯಿಲಾ ಪಾರ್ಮ್ ಕಾಣುತ್ತಿದೆ. ದಕ್ಷಿಣಕನ್ನಡದ ಸ್ವಿಝರ್ ಲ್ಯಾಂಡ್ ಎನ್ನುವ ಹೆಸರಿನಲ್ಲಿ ಈ ಫಾರ್ಮ್ ನ ಸೊಬಗನ್ನು ಸವಿದ ಜನ ಹೇಳಿಕೊಳ್ಳುತ್ತಿದ್ದು, ಇದರಿಂದಾಗಿ ಹೆಚ್ಚಿನ ಜನರ ಬಾಯಲ್ಲಿ ಈ ಹೆಸರಲ್ಲೇ ಗುರುತಿಸಿಕೊಂಡಿದೆ. ಸುಮಾರು 1000 ಎಕರೆ ಭೂ ಭಾಗವನ್ನು ಹೊಂದಿದ್ದ ಈ ಫಾರ್ಮ್ ನಲ್ಲಿ ಇದೀಗ 704 ಎಕರೆ ಜಾಗ ಮಾತ್ರ ಉಳಿದುಕೊಂಡಿದೆ. 257 ಎಕರೆಯನ್ನು ಈ ಫಾರ್ಮ್ ನ ಪಕ್ಕದಲ್ಲೇ ಆರಂಭಗೊಳ್ಳಲಿರುವ ಪಶು ವೈದ್ಯಕೀಯ ಕಾಲೇಜಿಗೆ ನೀಡಲಾಗಿದೆ.
ಉಳಿದ ಜಾಗವು ಸ್ಥಳೀಯ ಗ್ರಾಮಸ್ಥರ ಸ್ವಾದೀನಕ್ಕೆ ಹೋಗಿವೆ. ಮಳೆಗಾಲದಲ್ಲಿ ಈ ಫಾರ್ಮ್ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ರಸ್ತೆಯಲ್ಲಿ ಸಾಗುವ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಸರಕಾರದ ಈ ಫಾರ್ಮ್ ಇದೀಗ ಪುಂಡ ಪೋಕರಿಗಳ ನೆಚ್ಚಿನ ತಾಣವಾಗುತ್ತಿದೆ. ಜಾನುವಾರುಗಳ ಮೇವಿನ ತಾಣವಾಗಿರುವ ಈ ಪ್ರದೇಶ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಆದರೆ, ಪ್ರಕೃತಿಯ ಸವಿಯನ್ನು ಸವಿಯಲು ಬರುವ ಜನ ಈ ಕೇಂದ್ರವನ್ನು ಪ್ರವೇಶಿಸುತ್ತಿದ್ದು, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಲಾರಂಭಿಸಿದ್ದಾರೆ. ಹೆಚ್ಚಾಗಿ ಯುವಕ-ಯುವತಿಯರು ತಮ್ಮ ಮೋಜು- ಮಸ್ತಿಗಾಗಿ ಈ ಕೇಂದ್ರವನ್ನು ಆರಿಸಿಕೊಳ್ಳುತ್ತಿದ್ದು, ಇವರ ಪುಂಡಾಟಿಕೆಯನ್ನು ಪ್ರಶ್ನಿಸುವ ಕೇಂದ್ರದ ಸಿಬ್ಬಂದಿಗಳ ಮೇಲೂ ಈ ಕಿಡಿಗೇಡಿಗಳು ಹಲ್ಲೆಗೆ ಮುಂದಾಗುತ್ತಿದ್ದಾರೆ.
: ಇಂದಿನಿಂದ ಓಪನ್ ಆಗಲಿವೆ ಬಾರ್ ಅಂಡ್ ರೆಸ್ಟೋರೆಂಟ್; ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ
ಈ ವಿಚಾರವನ್ನು ಕೇಂದ್ರದ ಸಿಬ್ಬಂದಿಗಳು ಕೊಯಿಲಾ ಗ್ರಾಮಪಂಚಾಯತ್ ಗಮನಕ್ಕೂ ತಂದಿದ್ದಾರೆ. ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಕಿಡಿಗೇಡಿ ವರ್ತನೆಗಳು ಮಾತ್ರ ಮುಂದುವರಿದಿದೆ ಎನ್ನುತ್ತಾರೆ ಕೊಯಿಲಾ ಗ್ರಾಮಪಂಚಾಯ್ ನ ಮಾಜಿ ಅಧ್ಯಕ್ಷೆ ಯಶೋದಾ. ತಮ್ಮ ಅಮಲಿನ ಚಾಳಿ ತೀರಿಸಿಕೊಳ್ಳಲು ಯುವಕರು ಇಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲಿ ಎಸೆದು ಪ್ರಕೃತಿಯ ಸೌಂದರ್ಯವನ್ನು ಕದಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.
ಜಾನುವಾರು ಸಂವರ್ಧನಾ ಕೇಂದ್ರ ಸಂಪೂರ್ಣವಾಗಿ ಜಾನುವಾರುಗಳಿಗೆ ಮಾತ್ರ ಮೀಸಲಾಗಿದ್ದು, ಇಲ್ಲಿ ಪ್ರವಾಸಿಗರಿಗೆ ಅವಕಾಶವನ್ನು ನಿರಾಕರಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಕಿಡಿಗೇಡಿಗಳ ಉಪಟಲ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಲ್ಲಿ ಪೋಲೀಸ್ ಔಟ್ ಪೋಸ್ಟ್ ಸ್ಥಾಪಿಸಿ ಕೇಂದ್ರವನ್ನು ಪುಂಡ ಪೋಕರಿಗಳಿಂದ ರಕ್ಷಿಸುವ ಕೆಲಸ ನಡೆಯಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರದೀಪ್. ಜಾನುವಾರು ಕೇಂದ್ರದಲ್ಲಿ ಸಿಬ್ಬಂದಿಗಳ ಸಂಖ್ಯೆ ಕೊರತೆಯಿದ್ದು, ನೂರಾರು ಎಕರೆ ಪ್ರದೇಶವನ್ನು ಕಾವಲು ಕಾಯುವುದು ಸಾಧ್ಯವಿಲ್ಲದ ಕಾರಣ ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ.