“ಶಿಕ್ಷಕರ ದಿನಾಚರಣೆಯಂದು ನಮ್ಮ ವೃತ್ತಿಧರ್ಮದ ಬಗ್ಗೆ ಖುಷಿ ಕೊಡುವ ಕ್ಷಣಗಳನ್ನು ನೆನಪಿಸಿಕೊಳ್ಳೋಣ. ಭಾರತದಲ್ಲಿ ಗುರುಪರಂಪರೆಗೆ ವಿಶೇಷ ಸ್ಥಾನ ಹಾಗೂ ಸರ್ವಪಳ್ಳಿ ರಾಧಾಕೃಷ್ಣರ ಕೊಡುಗೆ ಅಪಾರ. ಭಾರತ ದೇಶ ಪ್ರಕಾಶಿಸುವ ನಾಡು. ನಾವೆಲ್ಲ ನಿತ್ಯ ಜ್ಞಾನಿಗಳಾಗೋಣ” ಎಂದು ಅಂಬಿಕಾದಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾದ ಬೆಟ್ಟಂಪಾಡಿ ಪದವಿ ಕಾಲೇಜಿನ ಪ್ರಾಚಾರ್ಯರಾದ ವರದರಾಜ ಚಂದ್ರಗಿರಿಯವರು ಶಿಕ್ಷಕರಿಗೆ ಶುಭ ಹಾರೈಸಿದರು ಹಾಗೂ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಭಾವ ಜಗತ್ತನ್ನು ವಿಸ್ತರಿಸಲು ಶಿಕ್ಷಣದಲ್ಲಿ ಯೋಗ, ಧ್ಯಾನ, ಸಂಗೀತ, ಆಧ್ಯಾತ್ಮಕ್ಕೆ ವಿಶೇಷ ಸ್ಥಾನವಿದೆ. ಆದುದರಿಂದ ಕೋವಿಡ್-19ಕ್ಕೆ ಖಂಡಿತಾ ಹೆದರುವ ಅಗತ್ಯವಿಲ್ಲ. ಮಾನಸಿಕ ಧೈರ್ಯದಿಂದ ಎಲ್ಲವನ್ನೂ ಗೆಲ್ಲಬಹುದು. ನಮ್ಮ ಪರಂಪರೆ ಬಲಯುತವಾಗಿದೆ ಎಂದು ಶಿಕ್ಷಕರಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಈ ವಿಶೇಷ ಸಮಾರಂಭದಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರೂ ತದನಂತರ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಲ್ನಾಡು ಜನಾರ್ಧನ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಶಿಷ್ಯ, ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ಸಂಚಾಲಕ, ಶ್ರೀ ಸುಬ್ರಹ್ಮಣ್ಯ ನಟ್ಟೋಜರ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಾ ಗುರುಗಳಿಗೆ ತಮ್ಮ ಶಿಷ್ಯಂದಿರ ಅಭಿನಂದನೀಯ ಕಾರ್ಯಗಳಿಗಿಂತ ಸಂತಸದ ವಿಚಾರ ಬೇರೊಂದಿಲ್ಲ ಎಂದರು. ಹಾಗೂ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜರು ಸನ್ಮಾನಿತರ ಉತ್ತಮ ಸೇವೆಯ ಗುಣಗಾನ ಮಾಡಿದರು. ಹಾಗೂ ಗುರುಗಳ ಪ್ರೇರಣೆಯಿಂದ ಈ ವಿದ್ಯಾಲಯದ ಸ್ಥಾಪನೆಯಾಯಿತು ಎಂದು ಅಭಿನಂದಿಸಿದರು.
ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ನಿರ್ದೇಶಕರೂ ಸಭಾಧ್ಯಕ್ಷರೂ ಆದ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿಯವರು ಶಿಕ್ಷಕರಿಗೆ ಸರ್ವಪಳ್ಳಿ ರಾಧಾಕೃಷ್ಣ, ಅಬ್ರಹಾಂ ಲಿಂಕನ್ ಮುಂತಾದವರ ನುಡಿಮುತ್ತುಗಳನ್ನು ತಿಳಿಸಿ ಶುಭ ಹಾರೈಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ಹಾಗೂ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿನ ಪ್ರಾಚಾರ್ಯರಾದ ಶ್ರೀಮತಿ ರಾಜಶ್ರೀ ನಟ್ಟೋಜ, ವಸತಿಯುತ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಭಟ್ ಗಾಳಿಮನೆ, ಅಂಬಿಕಾ ಬಾಲ ವಿದ್ಯಾಲಯದ ಪ್ರಾಚಾರ್ಯರಾದ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸುಜಯ ಪ್ರಾರ್ಥಿಸಿದರು. ಉಪನ್ಯಾಸಕ ಸತೀಶ್ ಸನ್ಮಾನ ಪತ್ರ ವಾಚಿಸಿದರು. ಉಪಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಸುಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.