ಬೆಂಗಳೂರು,ಸೆ.7-ಎಡೆಬಿಡದೆ ಕಾಡುತ್ತಿರುವ ಕೊರೊನಾ ಅಟ್ಟಹಾಸ, ಡಿಜೆಹಳ್ಳಿ ಗಲಭೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಸಂಜೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಕರೆದಿರುವ ಸಭೆಗೆ ಎಲ್ಲಾ ಸಚಿವರು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.
ಕೋವಿಡ್ ನಿಯಂತ್ರಣ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ಮುಂದೆ ನಡೆಯಲಿರುವ ವಿಧಾನಸಭಾ ಅಧಿವೇಶನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆ ಇದೆ. ಸೆ. 21ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿವಿಧ ಇಲಾಖೆಗಳ ವಿಚಾರಗಳನ್ನು ಪ್ರಸ್ತಾಪಿಸಲಿವೆ. ಆದ್ದರಿಂದ, ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಯಡಿಯೂರಪ್ಪ ನಿರ್ದೇಶ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಉಸ್ತುವಾರಿ ಸಚಿವರುಗಳು ಜಿಲ್ಲೆಗೆ ಭೇಟಿ ನೀಡುವವಂತೆ ಯಡಿಯೂರಪ್ಪ ಕಳೆದ ವಾರ ಸೂಚಿಸಿದ್ದರು. ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಅವರು ಪಡೆದುಕೊಳ್ಳಲಿದ್ದಾರೆ.
ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಭೆ ಕರೆದಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ವಿಚಾರ ಇಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ. ಹೀಗಾಗಿ, ಅಧಿವೇಶನದಲ್ಲಿ ಹೇಗೆ ಇದಕ್ಕೆ ಉತ್ತರ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲು ಬಿಎಸ್ ವೈ ನಿರ್ಧರಿಸಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ.
ಸಂಪುಟ ಪುನಾರಚನೆಯಾದರೆ ಮೂರ್ನಾಲ್ಕು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಹಾಗಾಗಿ ಆ ಸಚಿವರ ವಿಶ್ವಾಸ ಗಳಿಸಲು ಸಿಎಂ ಯತ್ನಿಸ್ತಿದ್ದಾರೆ. ಇದರ ಭಾಗವಾಗಿಯೇ ಸಂಪುಟ ಸಭೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಧಿವೇಶನದಲ್ಲಿ ವಿಪಕ್ಷಗಳನ್ನು ಎದುರಿಸುವ ಬಗ್ಗೆಯೂ ಚರ್ಚೆ ನಡೆಯುವ ಸಂಭವ ಇದೆ.
ಡ್ರಗ್ಸ್ ದಂಧೆ, ಕೆಜಿ-ಡಿಜೆಹಳ್ಳಿ ಗಲಭೆ, ಕೊರೋನಾ ನಿರ್ವಹಣೆ, ವೈದ್ಯಕೀಯ ಉಪಕರಣ ಖರೀದಿ ಅಕ್ರಮ ಆರೋಪ ಪ್ರಕರಣ ಸೇರಿ ಹಲವು ವಿಷಯಗಳಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳು ಪ್ಲಾನ್ ಮಾಡುತ್ತಿದ್ದು, ಇದಕ್ಕೆ ತಿರುಗೇಟು ನೀಡಲು ರಣತಂತ್ರ ರೂಪಿಸಲಾಗುತ್ತದೆ ಎನ್ನಲಾಗಿದೆ.
ವಿವಿಧ ಇಲಾಖೆಗಳಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಪರಿಶೀಲನೆ, ಕೊರೋನಾ ತಡೆತೆ ಕ್ರಮಗಳು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳು, ಅಭಿವೃದ್ಧಿ ಕಾರ್ಯಗಳು, ಸಚಿವರ ಕಾರ್ಯ ವೈಖರಿ ಬಗ್ಗೆ ಬಿಎಸ್‍ವೈ ಪರಿಶೀಲನೆ ನಡೆಸಲಿದ್ದಾರೆ. ಅಧಿವೇಶನ ಹಾಗೂ ಮುಂದಿನ ನಡೆ ಬಗ್ಗೆ ಸಚಿವರಿಗೆ ಕೆಲವು ಸಿಎಂ ಒಂದಿಷ್ಟು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆ ತಲೆ ಎತ್ತಿದೆ ಎನ್ನುವ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅದರಲ್ಲೂ ಸ್ಯಾಂಡಲ್‍ವುಡ್ ಕಲಾವಿದರು ಹಾಗೂ ಕೆಲವು ಗಣ್ಯರು ಭಾಗಿಯಾಗಿದ್ದಾರೆ ಎಂಬ ಗುಸು ಗುಸು ಹಬ್ಬಿದೆ. ಹೀಗಾಗಿ, ಈ ಬಗ್ಗೆ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಲಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನು ರಮೇಶ್ ಜÁರಕಿಹೊಳಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಎಲ್ಲಾ ಸಚಿವರು ಸಭೆಗೆ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದ್ದು, ಕೋವಿಡ್ ಸೋಂಕಿಗೆ ತುತ್ತಾಗಿರುವ ಸಚಿವರಾದ ಕೆ. ಎಸ್. ಈಶ್ವರಪ್ಪ, ಶಿವರಾಂ ಹೆಬ್ಬಾರ್ ಸಭೆಗೆ ಗೈರಾಗುವ ಸಾಧ್ಯತೆ ಇದೆ.