ಬೆಂಗಳೂರು,ಸೆ.8- ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ದೆಹಲಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು. ಯಾರೊಬ್ಬರೂ ಕೂಡ ಅಪಸ್ವರ ತೆಗೆಯಬಾರದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಈ ಕ್ಷಣದವರೆಗೂ ದೆಹಲಿ ವರಿಷ್ಠರು ಸಂಪುಟ ಪುನಾರಚನೆ ಬಗ್ಗೆಯಾಗಲಿ ಇಲ್ಲವೇ ವಿಸ್ತರಣೆ ಮಾಡುವ ಕುರಿತಂತೆ ನನಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೇ ತಿಂಗಳ 10ರ ನಂತರ ದೆಹಲಿಗೆ ತೆರಳಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ಮಾಡುತ್ತೇನೆ. ಅಂತಿಮವಾಗಿ ವರಿಷ್ಠರ ನಿರ್ಧಾರವನ್ನು ಎಲ್ಲರೂ ಒಪ್ಪಲೇಬೇಕೆಂದು ಸೂಚಿಸಿದ್ದಾರೆ.
ನಿನ್ನೆ ರಾತ್ರಿ ಗೃಹ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ ಅಧಿವೇಶನ, ಕೇಂದ್ರದಿಂದ ಬರಬೇಕಾದ ಅನುದಾನ, ನೆರೆ ಪರಿಹಾರ ಮಹತ್ವದ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿರುವ ಬಿಎಸ್‍ವೈ, ಹೈಕಮಾಂಡ್ ಭೇಟಿಗೆ ಸಮಯ ಅವಕಾಶ ಕೇಳಿದ್ದೇನೆ.
ಹೈಕಮಾಂಡ್‍ನಿಂದ ಆಹ್ವಾನ ಬಂದ ಕೂಡಲೇ ದೆಹಲಿಗೆ ತೆರಳುವೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಚಿವರನ್ನು ಸಂಪುಟದಿಂದ ಕೈಬಿಡುವ ವಿಚಾರದಲ್ಲೂ ವರಿಷ್ಠರದ್ದೇ ಅಂತಿಮ ನಿರ್ಧಾರ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ಒಪ್ಪಿಕೊಳ್ಳಬೇಕು ಎಂದು ಮನವರಿಕೆ ಮಾಡಿದ್ದಾರೆ.
ಸದ್ಯಕ್ಕೆ ಸಚಿವರನ್ನು ಸಂಪುಟದಿಂದ ಕೈಬಿಡುವುದು ಬೇಡ ಎಂದು ಮನವಿ ಮಾಡುತ್ತೇನೆ. ಆದರೆ ವರಿಷ್ಠರ ನಿರ್ಧಾರ ಏನು ಎಂಬುದು ನನಗೂ ಕೂಡ ಗೊತ್ತಿಲ್ಲ. ಉಳಿದ ಅವಧಿಗೆ ನೀವೆಲ್ಲ ನನ್ನ ಬೆಂಬಲಕ್ಕಿರಿ, ನಿಮ್ಮ ಬೆಂಬಲಕ್ಕೆ ನಾನಿರುವೆ. ಉತ್ತಮ ಆಡಳಿತ ಕೊಡೋಣ ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ಸಚಿವರಾಗಿ ಕೆಲಸ ಮಾಡಲು ಕೋವಿಡ್ ಅಡ್ಡಿಯಾಗಿದೆ. ನಮ್ಮ ಇಲಾಖೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಜÁರಿ ಮಾಡುವ ಚಿಂತನೆ ಇದೆ. ಆದರೆ ಕೋವಿಡ್‍ನಿಂದ ಇಲಾಖಾ ಯೋಜನೆಗಳ ಜಾರಿ ಕಷ್ಟವಾಗಿದೆ. ನಮಗೆ ಇನ್ನೂ ಕಾಲಾವಕಾಶ ಬೇಕು. ಒಂದೇ ವರ್ಷದಲ್ಲಿ ಇಲಾಖೆಯಲ್ಲಿ ಸಾಧನೆ ಮಾಡೋದು ಕಷ್ಟ ಎಂದು ಕೆಲ ಸಚಿವರು ಅವಲತ್ತುಕೊಂಡಿದ್ದಾರೆ.
22ಕ್ಕೂ ಹೆಚ್ಚು ಸಂಪುಟ ಸಚಿವರು ಭಾಗಿಯಾಗಿದ್ದ ಸಭೆಯಲ್ಲಿ ಅಧಿವೇಶನಕ್ಕೆ ಸಜ್ಜಾಗುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗಿದ್ದು, ಕೆಲ ವಿಧೇಯಕಗಳ ಮಂಡನೆ, ಅಭಿವೃದ್ಧಿ ಕಾರ್ಯಗಳು, ಇಲಾಖೆ ಕಾರ್ಯಗಳು, ಕೊವೀಡ್ ತಡೆಗೆ ಹಾಗೂ ಪ್ರವಾಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಸದನದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ ಅಂಶಗಳ ಮೂಲಕ ಉತ್ತರ ಕೊಡುವ ಬಗ್ಗೆ ಚರ್ಚಿಸಲಾಗಿದೆ.
ಜೊತೆಗೆ ಡ್ರಗ್ಸ್ ದಂಧೆ, ಅದರ ನಿಯಂತ್ರಣ ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಲಾಖಾವಾರು ಯೋಜನೆ, ಕೇಂದ್ರದಿಂದ ಬರಬೇಕಿರುವ ಬಾಕಿ ಅನುದಾನಗಳ ಬಗ್ಗೆ ಸಿಎಂ ಸಂಬಂಧಿತ ಸಚಿವರಲ್ಲಿ ಮಾಹಿತಿ ಕೇಳಿದ್ದಾರೆ.
ಇನ್ನು ಎರಡು ದಿನಗಳಲ್ಲಿ ಈ ಬಗ್ಗೆ ನಿಖರ ಮಾಹಿತಿ ಕೊಡುವಂತೆ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮುಂದಿನ ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ತೆರಳುವ ಸಾಧ್ಯತೆ ಇದ್ದು, ಕೇಂದ್ರದ ವಿವಿಧ ಸಚಿವರುಗಳನ್ನು ಭೇಟಿ ಮಾಡಲಿದ್ದು, ರಾಜ್ಯದ ಬಾಕಿ ಯೋಜನೆಗಳು, ಬಾಕಿ ಅನುದಾನಗಳಿಗೆ ಮನವಿ ಮಾಡಲಿದ್ದಾರೆ. ಕೇಂದ್ರಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ.