ಬೆಂಗಳೂರು, ಸೆ.9- ಡ್ರಗ್ಸ್ ಜಾಲದ ಆಳ-ಅಗಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಂಧಿತ ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿಯವರ ವಿಚಾರಣೆ ಮುಂದುವರೆಸಿದ್ದು, ಸುಮಾರು 34 ಮಂದಿಯ ಹೆಸರನ್ನು ಬಾಯಿ ಬಿಡಿಸಿದ್ದಾರೆ.
ಈ ಇಬ್ಬರು ನಟಿಯರು ಚಿತ್ರರಂಗದ ಪ್ರಮುಖ ನಟಿಯೊಬ್ಬರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಮತ್ತು ಅವರ ಪುತ್ರರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ. ಸಿಸಿಬಿಯ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಚಿತ್ರರಂಗದ ಖ್ಯಾತನಾಮರು ಮತ್ತು ರಾಜಕಾರಣಿಗಳ ಬೆನ್ನು ಹುರಿಯಲ್ಲಿ ಚಳಿ ಶುರುವಾಗಿದೆ.
ಬಂಧಿತ ನಟಿಯರನ್ನು ಪೊಲೀಸ್ ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ನಟಿ ಸಂಜನಾ ಸಾಕ್ಷ್ಯನಾಶ ಮಾಡಲು ತಮ್ಮ ಐ-ಪೋನ್‍ನ ವಾಟ್ಸ್‍ಅಪ್‍ನಲ್ಲಿದ್ದ ಚಾಟ್‍ಗಳನ್ನು ಮತ್ತು ಗ್ರೂಪ್ ಮೆಸೇಜ್‍ಗಳನ್ನು ಅಳಿಸಿ ಹಾಕಿದ್ದಾರೆ.
ಅದನ್ನು ರಿಕವರಿ ಮಾಡಲು ಸಿಸಿಬಿ ಪೊಲೀಸರು ಮತ್ತೆ ಉನ್ನತ ತಂತ್ರಜ್ಞಾನದ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ವಿಚಾರಣೆ ವೇಳೆ ನಟಿಯರಿಬ್ಬರು ಪಾರ್ಟಿ ನಡೆಯುತ್ತಿದ್ದ ಸ್ಥಳಗಳು, ಅದರ ಆಯೋಜಕರು, ಭಾಗವಹಿಸುತ್ತಿದ್ದವರ ಮಾಹಿತಿಯನ್ನು ಹೊರಗೆಡವಿದ್ದಾರೆ ಎನ್ನಲಾಗಿದೆ.
ಯಲಹಂಕ, ಕಮ್ಮನಹಳ್ಳಿ, ಜೊತೆ ನಗರದ ಹೊರ ವಲಯದ ನಿರ್ಜನ ಪ್ರದೇಶಗಳಲ್ಲಿ ತಡರಾತ್ರಿ ಪಾರ್ಟಿ ನಡೆಯುತ್ತಿದ್ದಾಗಿ ಹೇಳಿದ್ದಾರೆ. ಪ್ರಮುಖ ಆರೋಪಿಗಳಾದ ವಿರೇನ್ ಖನ್ನಾ, ರಾಹುಲ್ ತೋನ್ಸೆ ಅವರು ಹೈ ಫೈ ಹೋಟೆಲ್‍ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದರು.
ಅದರಲ್ಲಿ ಇಬ್ಬರು ಶಾಸಕರ ಪುತ್ರರು, ಪ್ರಭಾವಿ ಉದ್ಯಮಿಗಳ ಮಕ್ಕಳು ಖಾಯಂ ಗಿರಾಕಿಗಳಾಗಿದ್ದರು. ರೆಸಾರ್ಟ್‍ಗಳಲ್ಲೂ ಪಾರ್ಟಿಗಳಲ್ಲೂ ಬಹಳಷ್ಟು ಮಂದಿ ಭಾಗಿಯಾಗಿದ್ದಾರೆ ಎಂದು ನಟಿಯರಿಬ್ಬರು ಹೇಳಿದ್ದಾರೆ ಎನ್ನಲಾಗಿದೆ.ನಟಿ ಯರ ಹೇಳಿಕೆ ಆಧರಿಸಿ ಮತ್ತಷ್ಟು ಆರೋಪಿಗಳ ಪಟ್ಟಿಯನ್ನು ಸಿದ್ದ ಪಡಿಸಿರುವ ಸಿಸಿಬಿ ಪೊಲೀಸರು ಎಲ್ಲರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.
ಪಾರ್ಟಿಗಳು ನಡೆದಿವೆ ಎಂದು ಹೇಳಲಾದ ಹೊಟೇಲ್‍ಗಳು ಮತ್ತು ರೆಸಾರ್ಟ್ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ವಿಚಾರಣೆಯ ಒಂದು ಹಂತದಲ್ಲಿ ಸಂಜನಾ, ತಾನು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾಗಿ ಒಪ್ಪಿಕೊಂಡಿದ್ದು, ಎಲ್ಲ ನನ್ನ ಕರ್ಮ ಎಂದು ಹಳಹಳಿಕೆ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಸುಮಾರು 10 ಚಿತ್ರಗಳಲ್ಲಿ ನಟಿಸಿರುವ, ಚಿತ್ರರಂಗದಲ್ಲಿ ಭಾರೀ ಪ್ರಚಾರ ಪಡೆಯುವ ಮತ್ತೊಬ್ಬ ನಟಿಯೂ ನಮ್ಮ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದರೆ ಮತ್ತಷ್ಟು ಮಾಹಿತಿಗಳು ಹೊರ ಬರಲಿವೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.