ರಾಮ ಜನ್ಮಭೂಮಿ ವಿವಾದ ಕೊನೆಗೂ ಇತ್ಯರ್ತಗೊಂಡಿದ್ದು, ಇತ್ತೀಚೆಗಷ್ಟೇ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಮಾಡಿದ್ದರು. 2022ರ ವೇಳೆಗೆ ರಾಮ ಮಂದಿರ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಶಾಕಿಂಗ್ ಬೆಳವಣಿಗೆಯೊಂದು ನಡೆದಿದೆ. ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್ನಿಂದ ದೊಡ್ಡ ಮೊತ್ತದ ಹಣ ವಿತ್ಡ್ರಾ ಮಾಡಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ. ನಕಲಿ ಚೆಕ್ ಬಳಕೆ ಮಾಡಿ ಎರಡು ಬಾರಿ ಹಣ ವಿತ್ ಡ್ರಾ ಮಾಡಲಾಗಿತ್ತು. ಮೂರನೇ ಬಾರಿಯೂ ಖದೀಮರು ಇದೇ ಮಾರ್ಗ ಅನುಸರಿಸಲು ಮುಂದಾಗಿದ್ದರು. ಈ ಬಗ್ಗೆ ಬ್ಯಾಂಕ್ನವರಿಗೆ ಅನುಮಾನ ಬಂದಿತ್ತು. ಹೀಗಾಗಿ, ಮೂರನೇ ಬಾರಿ ಹಣ ವಿತ್ ಡ್ರಾ ಮಾಡಲು ಬಂದಾಗ ಬ್ಯಾಕ್ ಮ್ಯಾನೇಜರ್ ಟ್ರಸ್ಟ್ನವರಿಗೆ ತಿಳಿಸಿದ್ದರು. ವಿಚಾರ ತಿಳಿಯುತ್ತಿದ್ದಂತೆ ಟ್ರಸ್ಟ್ನವರು ಬ್ಯಾಂಕ್ಗೆ ಆಗಮಿಸಿದ್ದಾರೆ. ಈ ವೇಳೆ ಇದು ನಕಲಿ ಚೆಕ್ ಎನ್ನುವ ವಿಚಾರ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೇ ಕೆಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಈಗಾಗಲೇ ಅನುಮತಿ ಸಿಕ್ಕಿದೆ. ಈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದೆ. ರಾಮ ಮಂದಿರ ನಿರ್ಮಾಣವಾದ ನಂತರದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಹೀಗಾಗಿ, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ.