Sunday, January 19, 2025
ಹೆಚ್ಚಿನ ಸುದ್ದಿ

ಭಾರಿ ಕುತೂಹಲ ಕೆರಳಿಸಿದೆ ಸಿಎಂ ಬಿಎಸ್‍ವೈ ದೆಹಲಿ ಪ್ರವಾಸ..! – ಕಹಳೆ ನ್ಯೂಸ್

ಬೆಂಗಳೂರು,ಸೆ.16- ನೆರೆ ಪರಿಹಾರ, ವಿವಿಧ ಅಭಿವೃದ್ಧಿ ಯೋಜನೆಗಳು, ಸಂಪುಟ ವಿಸ್ತರಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರದ ನಾಯಕರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ನವದೆಹಲಿಗೆ ತೆರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಡಿಯೂರಪ್ಪ ಅವರೊಂದಿಗೆ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ದೆಹಲಿಗೆ ತೆರಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಿಸುಮಾರು 6 ತಿಂಗಳ ಬಳಿಕ ದೆಹಲಿಗೆ ತೆರಳುತ್ತಿರುವ ಯಡಿಯೂರಪ್ಪ ಅವರು, ಈ ಬಾರಿ ಪ್ರಮುಖವಾಗಿ ಕೇಂದ್ರ ಸಚಿವರು ಹಾಗೂ ಬಿಜೆಪಿ ವರಿಷ್ಟರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವುದು ಈ ಹಿಂದಿನ ಭೇಟಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರಾಜ್ಯಕ್ಕೆ ಕೋವಿಡ್-19 ಅಧಿಕೃತವಾಗಿ ಬಂದ ನಂತರ ಸಿ.ಎಂ. ದೆಹಲಿಗೆ ಭೇಟಿ ಕೊಡಲು ಸಾಧ್ಯವಾಗಿರಲಿಲ್ಲ. ಹಲವು ಬಾರಿ ದೆಹಲಿಗೆ ತೆರಳಿ ಕೇಳಿಕೊಂಡಿದ್ದರೂ ವರಿಷ್ಟರು ಅನುಮತಿ ನೀಡಿರಲಿಲ್ಲ.

ಇದೀಗ ನಾಳೆಯಿಂದ ಒಟ್ಟು 3 ದಿನಗಳ ಕಾಲ ದೆಹಲಿಯಲ್ಲೇ ವಾಸ್ತ್ಯವ್ಯ ಹೂಡಲಿದ್ದು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸುವರು. ನೆರೆ ಪರಿಹಾರ ಮತ್ತಿತರ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಲಿರುವ ಅವರು ಸಂಪುಟ ಕಸರತ್ತಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಮತ್ತೊಂದು ಮೂಲದ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಭೇಟಿ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆಗೆ ಬಿಎಸ್‍ವೈ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಇರುವ ಸಂಪುಟ ಸಚಿವರನ್ನು ಮಾರ್ಪಡಿಸುವ ಮನಸ್ಸು ಮುಖ್ಯಮಂತ್ರಿಗಳಿಗೆ ಇಲ್ಲದೇ ಹೋದರೂ, ಉಮೇಶ್ ಕತ್ತಿಯವರಂತಹ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಈ ಪ್ರಯತ್ನಗಳನ್ನು ಮಾಡಬೇಕಿದೆ. ಹೀಗಾಗಿ ಪಕ್ಷದ ಉನ್ನತಾಧಿಕಾರಿಗಳನ್ನು ಭೇಟಿ ಮಾಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯ ಇಬ್ಬರು ವಲಸಿಗರು ಹಾಗೂ ಇಬ್ಬರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಅರವಿಂದ್ ಲಿಂಬಾವಳಿ ಹಾಗೂ ಸಿಪಿ ಯೋಗೇಶ್ವರ್ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಗೆ ಪಕ್ಷದ ಮುಖಂಡರಿಂದ ಎದುರಾಗಿರುವ ತೊಡಕನ್ನು ನಿವಾರಿಸುವಂತೆ ಆ ಕ್ಷೇತ್ರದ ಅನರ್ಹ ಶಾಸಕರ ಬೇಡಿಕೆ ಬಗ್ಗೆಯೂ ಮುಖ್ಯಮಂತ್ರಿಗಳು ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ಸಂಭವವಿದೆ ಎನ್ನಲಾಗುತ್ತಿದೆ.

ಬಿಜೆಪಿ ಸರ್ಕಾರ ರಚನೆಯಾಗಿ 1 ವರ್ಷ ಕಳೆದರೂ ಪೂರ್ಣ ಪ್ರಮಾಣದ ಸಂಪುಟ ರಚನೆ ಈವರೆಗೂ ಸಾಧ್ಯವಾಗಿಲ್ಲ. ಉಪಚುನಾವಣೆ ಬಳಿಕವೂ ಸಂಪುಟ ವಿಸ್ತರಣೆ ಸಿಎಂ ಬಿಎಸ್‍ವೈಗೆ ಕಗ್ಗಂಟಾಗಿ ಪರಿಣಮಿಸಿದೆ. ಸಚಿವಾಕಾಂಕ್ಷಿಗಳ ಒತ್ತಡ ಒಂದೆಡೆಯಾದರೆ, ವಿರೋಧ ಪಕ್ಷಗಳ ಟೀಕೆಗಳು ಬಿಎಸ್ವೈ ಅವರನ್ನು ಹೈರಾಣಾಗಿಸಿದೆ.

ಇಂತಹ ಸಂದಿಗ್ನ ಪರಿಸ್ಥಿತಿಯಲ್ಲೂ ಬಿಜೆಪಿ ಹೈಕಮಾಂಡ್ ಮಾತ್ರ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರುತ್ತಿಲ್ಲ. ಆದರೂ ಪ್ರಯತ್ನ ಬಿಡದ ಸಿಎಂ ಬಿಎಸ್‍ವೈ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ದೆಹಲಿಗೆ ಹೊರಟಿದ್ದಾರೆ. ಆದರೆ, ಅವರ ಈ ಭೇಟಿ ಕೂಡ ಫಲ ಕೊಡುವ ನಿರೀಕ್ಷೆಗಳಿಲ್ಲ ಎನ್ನುತ್ತಿವೆ ದೆಹಲಿ ಮೂಲಗಳು.