Saturday, November 16, 2024
ಪುತ್ತೂರು

ಸರ್ಕಾರಿ ಸಿಬ್ಬಂದಿ ಎಡವಟ್ಟು; ಫಲಾನುಭವಿಗೆ ಸಿಗುತ್ತಿಲ್ಲ ಅಂಕವಿಕಲ ವೇತನದ ದುಡ್ಡು – ಕಹಳೆ ನ್ಯೂಸ್

ಪುತ್ತೂರು(ಸೆ.16): ಅಂಗವಿಕಲ‌ ವೇತನ ಪಡೆಯುವ ನಿಟ್ಟಿನಲ್ಲಿ ಬ್ಯಾಂಕ್​​ ಖಾತೆ ಸಂಖ್ಯೆ ನಮೂದಿಸುವ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ‌ ಕಡಬ ತಾಲೂಕು ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಇದರ ಪರಿಣಾಮ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣಗೌಡ ಎಂಬುವವರ ಅಂಗವಿಕಲ ವೇತನ ಕಳೆದ ಹತ್ತು ತಿಂಗಳಿಂದ ಅನ್ಯ ವ್ಯಕ್ತಿಯ ಖಾತೆಗೆ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗವಿಕಲ ವೇತನ ಅರ್ಜಿಯ ಜೊತೆ ನೀಡಲಾದ ಬ್ಯಾಂಕ್ ಖಾತೆಯ ವಿವರ ಕಂಪ್ಯೂಟರ್​​ನಲ್ಲಿ ದಾಖಲಿಸುವ ಸಮಯದಲ್ಲಿ ಕೊನೆಯ ಸಂಖ್ಯೆ ಮಾತ್ರ ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಅರ್ಹ ಫಲಾನುಭವಿ ಲಕ್ಷ್ಮಣಗೌಡರ ಖಾತೆಗೆ ಜಮೆಯಾಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನ ಹಣ ಇನ್ನೊಬ್ಬರಿಗೆ ಜಮೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಕ್ಷ್ಮಣಗೌಡರು ಅರ್ಜಿ ಹಾಕಿದ ಬಳಿಕ 2019 ಜುಲೈ.1ರಂದು ಅಂಗವಿಕಲ ವೇತನಕ್ಕೆ ಅರ್ಹರು ಎಂದು ಮಂಜೂರಾತಿ ಪತ್ರ ದೊರಕಿತ್ತು. ಆದರೆ, ತನ್ನ ಖಾತೆಗೆ ಬರಬೇಕಾದ ಹಣ ಮಾತ್ರ ಜಮೆಯಾಗಲಿಲ್ಲ. ಹತ್ತಾರು ಸಲ ಗ್ರಾಮಕರಣಿಕರ ಕಛೇರಿ, ಬ್ಯಾಂಕ್‍ಗೆ ಅಲೆದಾಟ ನಡೆಸಿದಾಗಲೂ ಸಮರ್ಪಕ ಉತ್ತರ ದೊರೆಯಲಿಲ್ಲ. ಇದರಿಂದ ಬೇಸತ್ತ ಇವರು ನಂತರ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ತನ್ನ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ತಪ್ಪಾಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಲಕ್ಷ್ಮಣಗೌಡರಿಗೆ ಸೇರಬೇಕಿದ್ದ ಹಣ ಬೇರೊಬ್ಬರ ಖಾತೆಗೆ ಜಮೆಯಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣಗೌಡ ಅವರದ್ದು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ. ಮನೆಯಲ್ಲಿ ಅಷ್ಟೇನು ಆದಾಯವಿಲ್ಲ. ಲಕ್ಷ್ಮಣಗೌಡರಿಗೆ ದೃಷ್ಟಿ ದೋಷದ ಹಿನ್ನೆಲೆಯಲ್ಲಿ ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಬೆನ್ನು ಮೂಲೆಯ ಶಸ್ತ್ರ ಚಿಕಿತ್ಸೆ ನಡೆದು ಲಕ್ಷಾಂತರ ರೂ. ಸಾಲದಲ್ಲಿದ್ದಾರೆ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದರೂ, ದುಡಿಯುವ ಚೈತನ್ಯವನ್ನು ಮಾತ್ರ ಕಳೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ಮುಂದುವರಿಸುತ್ತಿದ್ದು, ತಿಂಗಳಿಗೆ 2.500 ರೂ ವೆಚ್ಚ ತಗಲುತ್ತದೆ.

ಲಕ್ಷ್ಮಣಗೌಡರ ಪತ್ನಿ ಮನೆಯ ಖರ್ಚು ಸಾಗಿಸಲು ರಾತ್ರಿ ಹಗಲೆನ್ನದೆ ಬೀಡಿ ಕಟ್ಟುತ್ತಾ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಲಕ್ಷ್ಮಣಗೌಡರಿಗೆ ಇಬ್ಬರು ಮಕ್ಕಳ ಪೈಕಿ ಒಬ್ಬಾತ ದೀಕ್ಷಿತ್ ಸುಳ್ಯದಲ್ಲಿ ಡಿಪ್ಲೊಮ ವ್ಯಾಸಂಗ ಮಾಡುತ್ತಿದ್ದಾನೆ. ರಜಾ ದಿನಗಳಲ್ಲಿ ಅಡಕೆ ಸುಳಿಯುವ ಕೂಲಿ ಕೆಲಸ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ಸ್ವಲ್ಪ ಮಟ್ಟಿನ ಆದಾಯ ಭರಿಸಿಕೊಳ್ಳುತ್ತಿದ್ದಾನೆ.

ಎರಡನೆಯವ ಗೌತಮ್ ಕಾಣಿಯೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿ ಓದುತ್ತಿದ್ದಾಗ ಶಾಲಾ ಆಟದ ಮೈದಾನದ ಪಕ್ಕದ ಜಾಗದಲ್ಲಿರುವ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದ . ಆರ್ಥಿಕ ಸಂಕಷ್ಟ , ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣಗೌಡರಿಗೆ ಗೌತಮ್ ಸಾವು ಇನ್ನಷ್ಟು ಜರ್ಜರಿತವಾಗಿಸಿದೆ. ಈ ಮದ್ಯೆ ಅಂಗವಿಕಲ ವೇತನ ಹಣ ಜಮೆ ಬಗ್ಗೆ ಗೊಂದಲ ವೇರ್ಪಟ್ಟಿರುವುದು ಇನ್ನಷ್ಟು ಸಂಕಷ್ಟಕ್ಕೆ ಎಡೆಮಾಡಿದೆ.

ತನ್ನ ಖಾತೆಗೆ ಬರಬೇಕಾಗಿದ್ದ ಹಣ ಕಾಣಿಯೂರಿನ ಸ್ಥಳೀಯ ವ್ಯಕ್ತಿಯೋರ್ವರ ಖಾತೆಗೆ ಜಮೆಯಾಗುತ್ತಿದ್ದು, ಈ ವಿಚಾರವನ್ನು ಲಕ್ಷ್ಮಣಗೌಡ ಆ ವ್ಯಕ್ತಿಯ ಗಮನಕ್ಕೂ ತಂದಿದ್ದಾರೆ. ಆದರೆ ಆ ವ್ಯಕ್ತಿ ಹಣ ನೀಡಲು ಕೊಂಚ ಹಿಂದೇಟು ಹಾಕುತ್ತಿದ್ದು, ಹಣಕ್ಕಾಗಿ ಲಕ್ಷ್ಮಣ ಗೌಡರು ಸರಕಾರಿ ಕಛೇರಿಗೆ ಪ್ರತಿನಿತ್ಯ ಅಲೆದಾಡಿ ಬೇಸತ್ತು ಹಣದ ಆಸೆಯನ್ನೇ ಬಿಟ್ಟಿದ್ದರು. ಇದೀಗ ಹಣವಿಲ್ಲದೆ ಸಂಸಾರ ಸಾಗಿಸುವುದು ಕಷ್ಟ ಎಂದು ಮತ್ತೆ ತನ್ನ ಹಣಕ್ಕಾಗಿ ಅಧಿಕಾರಿಗಳ ಮುಂದೆ ದಂಬಾಲು ಬೀಳಲಾರಂಭಿಸಿದ್ದಾರೆ.