Friday, September 20, 2024
ಸುದ್ದಿ

ಕುಕ್ಕೆ ಸುಬ್ರಮಣ್ಯನಿಗೆ ನಿರ್ಮಾಣವಾಗಲಿದೆ ಭವ್ಯ ಬ್ರಹ್ಮರಥ..! ಇದು ಜೀವಮಾನದ ಭಾಗ್ಯ ಎಂದ ಮುತ್ತಪ್ಪ ರೈ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ನಾಗಾರಾಧನೆ ಮೂಲಕ ದೇಶದಲ್ಲೇ ಪ್ರಸಿದ್ಧಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಬ್ರಹ್ಮರಥ ನೀಡುವ ಕಾರ್ಯ ಜೀವನದಲ್ಲಿ ದೊರೆತ ಬಹುದೊಡ್ಡ ಭಾಗ್ಯ ಎಂದು ಉದ್ಯಮಿ ಮುತ್ತಪ್ಪ ರೈ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೂತನವಾಗಿ ಬ್ರಹ್ಮರಥ ನಿರ್ಮಿಸಲು ದೇಗುಲದಿಂದ ಅಧಿಕೃತ ವೀಳ್ಯವನ್ನು ಗುರುವಾರ ಬೆಳಗ್ಗೆ ಪಡೆದ ಬಳಿಕ ಅವರು ದೇಗುಲದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಾಡಿನ ಸಮಸ್ತ ಜನರ ಪರವಾಗಿ ಈ ಬ್ರಹ್ಮರಥವನ್ನು ದೇಗುಲಕ್ಕೆ ನೀಡುತ್ತಿದ್ದೇವೆ. ದೇವರು ನಮಗೆ ನೀಡಿದ ಸಂಪತ್ತನ್ನು ದೇವರ ಸೇವೆ ಮೂಲಕ ನೀಡುವ ತೀರ್ಮಾನವಿದು. ದೇವರ ಇಚ್ಛೆಯಂತೆ ಅಜಿತ್‌ ಶೆಟ್ಟಿ ಜತೆಗೂಡಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮರಥ ನಿರ್ಮಿಸಿ ಕೊಡುತ್ತಿದ್ದೇವೆ. ಈ ಹಿಂದೆ ಉಳ್ಳಾಲ ಸೋಮನಾಥೇಶ್ವರ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಥ ನೀಡಿದ್ದೇವೆ. 108 ರಥಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆದ ರಥಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಅವರು ನೂತನ ರಥ ನಿರ್ಮಿಸಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸೇವೆ ಮಾಡುವ ಸೌಭಾಗ್ಯ
ಕ್ಷೇತ್ರದ ಭಕ್ತನಾಗಿ ಕ್ಷೇತ್ರಕ್ಕೆ ರಥ ನಿರ್ಮಿಸಲು ಅವಕಾಶ ದೊರೆತಿದ್ದು ಪುಣ್ಯ. ಈ ಸೌಭಾಗ್ಯವನ್ನು ಇಲ್ಲಿನ ದೇವರು, ದೇಗುಲದ ಆಡಳಿತ ಮಂಡಳಿ ಹಾಗೂ ಕ್ಷೇತ್ರದ ಭಕ್ತರು ಒದಗಿಸಿಕೊಟ್ಟಿದ್ದಾರೆ ಎಂದು ಬಿಡದಿಯ ರಿಯಾಲಿಟಿ ವೇಂಚರ್ ಬೆಂಗಳೂರು ಸಂಸ್ಥೆಯ ಪಾಲುದಾರ ಉದ್ಯಮಿ ಅಜಿತ್‌ ರೈ ಹೇಳಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಅಷ್ಟಮಂಗಲ ಪ್ರಶ್ನೆಯಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಯಶಸ್ವಿ ಆಗುತ್ತದೆ ಎಂದು ಕಂಡುಬಂದ ಕಾರಣಕ್ಕೆ ಸಂಕಲ್ಪ ತೊಟ್ಟು ಪ್ರಕಟನೆ ನೀಡಿದ್ದೆವು. ದಾನಿಗಳು ಮುಂದೆ ಬಂದು ರಥ ನಿರ್ಮಿಸಿಕೊಡುವುದಾಗಿ ಹೇಳಿದ ಮೇರೆಗೆ ಸರಕಾರದ ಆದೇಶ ಪಡೆದೇ ರಥ ನಿರ್ಮಿಸಲು ಅಧಿಕೃತ ವೀಳ್ಯ ನೀಡಿದ್ದೇವೆ ಎಂದರು.

ಬೆಳಗ್ಗೆ 6.30ರ ಅಮೃತಸಿದ್ಧಿ ಯೋಗದ ಶುಭ ಮುಹೂರ್ತದಲ್ಲಿ ಬ್ರಹ್ಮರಥದ ನಿರ್ಮಾಣ ಸಲುವಾಗಿ ದೇಗುಲದ ಪ್ರ. ಅರ್ಚಕ ಸೀತಾರಾಮ ಎಡಪಡಿತ್ತಾಯ ಪ್ರಾರ್ಥನೆ ನಡೆಸಿದರು. ಬಳಿಕ ದಾನಿ ಗಳಾದ ಮುತ್ತಪ್ಪ ರೈ -ಅನುರಾಧಾ ದಂಪತಿ, ಅಜಿತ್‌ ರೈ -ಡಾ| ಸತ್ವಾ ಎ. ಶೆಟ್ಟಿ ದಂಪತಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಸಮ್ಮುಖ ವೀಳ್ಯ ಸ್ವೀಕರಿಸಿದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಇಂಟೆಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ರವೀಂದ್ರ. ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಲ್ಲೇರಿ, ಕೃಷ್ಣಮೂರ್ತಿ ಭಟ್‌, ಮಹೇಶ್‌ ಭಟ್‌ ಕರಿಕ್ಕಳ, ರವೀಂದ್ರನಾಥ ಶೆಟ್ಟಿ, ರಾಜೀವಿ ರೈ ಆರ್‌., ಮಾಧವ ಡಿ., ತಾ.ಪಂ. ಸದಸ್ಯ ಅಶೋಕ ನೆಕ್ರಾಜೆ, ಸುಧೀರ್‌ಕುಮಾರ್‌ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ ಕಡಬ, ರಾಜೇಶ್‌ ಕಂಬಳ ರಥಶಿಲ್ಪಿ ರಾಜಗೋಪಾಲ ಉಪಸ್ಥಿತರಿದ್ದರು.

ರಥ ದಾನಿ ಮುತ್ತಪ್ಪ ರೈ, ಅಜಿತ್‌ ರೈ ದಂಪತಿಗಳನ್ನು ದೇಗುಲದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಬಳಿಕ ಅವರು ಶ್ರೀ ಸಂಪುಟ ನರಸಿಂಹ ಮಠಕ್ಕೆ ತೆರಳಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದರು.

ಮುಂದುವರಿದ ಅಸಮಾಧಾನ
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಬ್ಬರ ಮೂಲಕವೇ ಬ್ರಹ್ಮರಥ ನಿರ್ಮಿಸುವ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಅಸಮಾಧಾನ ಮುಂದುವರಿದಿದೆ. ದೇಗುಲದ ಜತೆ ಸಂಬಂಧವಿರುವ ಕೂಜುಗೋಡು ಮನೆತನದವರು, ದೇಗುಲದ ಆದಾಯ ಮತ್ತು ಭಕ್ತರ ವಂತಿಗೆ ಪಡೆದು ನಿರ್ಮಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವೀಳ್ಯ ನೀಡುವ ಕಾರ್ಯಕ್ರಮದಿಂದ ಅವರೆಲ್ಲ ದೂರ ಉಳಿದಿದ್ದರು. ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರೂ ಆಗಿರುವ ದಮಯಂತಿ ಕೂಜುಗೋಡು ಗೈರು ಹಾಜರಾಗಿದ್ದರು. ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಮಲೆಕುಡಿಯ ಜನಾಂಗದ ಮೋನಪ್ಪ ಮಾನಾಡು ಅವರಿಗೆ ಕಾರ್ಯಕ್ರಮದ ಆಮಂತ್ರಣವನ್ನೇ ನೀಡಿರಲಿಲ್ಲ. ಅವರೂ ಒಬ್ಬರೇ ವ್ಯಕ್ತಿಯಿಂದ ರಥ ನಿರ್ಮಿಸುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ರಥಬೀದಿಯಲ್ಲೇ ವಾಹನ ನಿಲುಗಡೆ 
ದೇಗುಲದ ಮುಂಭಾಗದ ರಥಬೀದಿ ವಾಹನ ನಿಲುಗಡೆ ನಿಷೇಧಿತ ಪ್ರದೇಶ. ವಾಹನ ಪೂಜೆ, ದೇಗುಲಕ್ಕೆ ಸರಕು ತರುವ ಸಂದರ್ಭ ಹಾಗೂ ಮುಖ್ಯಮಂತ್ರಿಗಳಂತಹ ವಿಐಪಿಗಳ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದರೆ, ಮುತ್ತಪ್ಪ ರೈ ಭೇಟಿ ವೇಳೆ 15ಕ್ಕೂ ಹೆಚ್ಚು ವಾಹನಗಳು ಜಂಕ್ಷನ್‌ನಲ್ಲಿರುವ ಮುಖ್ಯ ಗೇಟಿನ ಮೂಲಕವೇ ಪ್ರವೇಶಿದ್ದಲ್ಲದೆ, ರಥಬೀದಿಯಲ್ಲಿ ತಾಸುಗಟ್ಟಲೆ ನಿಲುಗಡೆ ಮಾಡಲಾಗಿತ್ತು. ದೇಗುಲಕ್ಕೆ ತೆರಳುವ ಭಕ್ತರಿಗೆ ಇದರಿಂದ ಅಡಚಣೆಯಾಗಿತ್ತು. ಈ ಕುರಿತು ಹಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.