ಮಂಗಳೂರು, ಸೆ. 23: ತೀವ್ರ ಆಕ್ಷೇಪ, ವಿವಾದಕ್ಕೆ ಕಾರಣವಾಗಿದ್ದ ಲೈಟ್‌ಹೌಸ್ ರಸ್ತೆಗೆ ಇಂದು ಸರಕಾರದ ಆದೇಶದಂತೆ ‘ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ’ ನಾಮಕರಣ ಮಾಡಲಾಯಿತು.
ಮೇಯರ್ ದಿವಾಕರ ಪಾಂಡೇಶ್ವರ ಅವರು ಕೆಥೊಲಿಕ್ ಕ್ಲಬ್ ಬಳಿ ಮುಲ್ಕಿ ಸುಂದರ ರಾಮ ಶೆಟ್ಟಿ ನಾಮಫಲಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಇದೊಂದು ಹೆಮ್ಮೆಯ ಕಾರ್ಯಕ್ರಮ. ಮುಲ್ಕಿ ಸುಂದರ ರಾಮ ಶೆಟ್ಟಿಯವರ ಎಲ್ಲಾ ಅಭಿಮಾನಿಗಳು ಸಂಭ್ರಮ ಪಡುವ ದಿನ ಎಂದರು.
ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಇಲ್ಲೇ ಹುಟ್ಟಿ ಬೆಳೆದ ವಿಜಯ ಬ್ಯಾಂಕನ್ನು ಉಳಿಸಿಕೊಳ್ಳಲಾಗದಿದ್ದರೂ, ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ನೆನಪಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಮುಲ್ಕಿ ಸುಂದರ ರಾಮ ಶೆಟ್ಟಿ ಅಭಿಮಾನಿ ಬಳಗದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ಕಾರ್ಯಕಾರಿ ಅಧ್ಯಕ್ಷ ಎ.ಬಿ. ಶೆಟ್ಟಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಉಪ ಮೇಯರ್ ವೇದಾವತಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮುಲ್ಕಿ ಸುಂದರ ರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ, ಅಜಿತ್ ಕುಮಾರ್ ಮಾಲಾಡಿ, ಮಾಜಿ ಮೇಯರ್ ಮಹಾಬಲ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.
ನಾಮಫಲಕ ಅನಾವರಣದ ಬಳಿಕ ಸೇರಿದ್ದವರು ಚೆಂಡೆ, ಮದ್ದಳೆಯೊಂದಿಗೆ ಲೈಟ್‌ಹೌಸ್‌ನಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.