ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರುತ್ತಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2020” ಕುರಿತು ಮಾಹಿತಿ ಕಾರ್ಯಗಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾ ಭಾರತಿ ಸಹಯೋಗದೊಂದಿಗೆ ವಿವೇಕಾನಂದ ಪದವಿ ಕಾಲೇಜಿನ ಸುವರ್ಣಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ “ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ನೀತಿ ಇದಾಗಿದ್ದು, ಮಗುವಿನಲ್ಲಿ ಗುಣಾತ್ಮಕತೆ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತದೆ. ‘ಯಾಕೆ’ ಎನ್ನುವ ಪ್ರಶ್ನಾರ್ಥಕ ಮನೋಭಾವಕ್ಕಿಂತಲೂ ‘ಹೇಗೆ ಅಲೋಚಿಸಬೇಕು’ ಎಂಬ ಕ್ರೀಯಾತ್ಮಕ ಚಿಂತನೆಯನ್ನು ಬಾಲ್ಯದಿಂದಲೇ ಬೆಳೆಸಲಾಗುತ್ತದೆ. ಭಾರತೀಯರಾದ ನಾವೆಲ್ಲ ಹೆಮ್ಮೆ ಮತ್ತು ಗರ್ವದಿಂದ ಈ ನೀತಿಯನ್ನು ಸ್ವೀಕರಿಸಿ ಒಂದಾಗಿ ಕಾರ್ಯನಿರ್ವಹಿಸೋಣ” ಎಂದರು.
ಈ ವೇಳೆ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ “ಮಾತೃಭಾಷಾ ಶಿಕ್ಷಣವೂ ಮಗುವಿನ ಭಾವನೆಯನ್ನು ಅರಳಿಸುತ್ತದೆ. ನಮಗೆ ಅಮೇರಿಕಾ, ಜಪಾನ್, ರಷ್ಯಾಗಳನ್ನು ನಾವು ಉದಾಹರಿಸಬೇಕಿಲ್ಲ. ನಮ್ಮ ದೇಶದ ಜ್ಞಾನ ಮತ್ತು ಮಹತ್ತರ ಸಾಧನೆಗಳು ಜಾಗೃತವಾದರೆ ನಾವು ವೈಭವವನ್ನು ಕಾಣುತ್ತೇವೆ. ಈ ಹಿನ್ನಲೆಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ – 2020’ ಮಹತ್ತರ ಕೊಡುಗೆ ನೀಡುವಂತಾಗಲಿ” ಎಂದರು.
ಮುಖ್ಯ ಅತಿಥಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಹರ್ಷ ನಾರಾಯಣ, ವಿದ್ಯಾಭಾರತಿಯ ರಾಜ್ಯ ಕಾರ್ಯದರ್ಶಿ ಶ್ರೀ ವಸಂತಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ಭಟ್ ಸ್ವಾಗತಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗ ಪ್ರಮುಖ್ ಶ್ರೀ ಕೇಶವ ಬಂಗೇರಾ ವಂದಿಸಿದರು. .