ನವದೆಹಲಿ/ಕೊಪೆನ್‍ಹಗೆನ್, ಸೆ.29-ಪ್ರಮುಖ ವಸ್ತುಗಳ ಜಾಗತಿಕ ಪೂರೈಕೆ ಸರಪಳಿಗಾಗಿ ಒಂದೇ ಮೂಲವನ್ನು ಅವಲಂಬಿಸುವುದು ಎಷ್ಟು ಗಂಡಾಂತರಕಾರಿ ಎಂಬುದನ್ನು ಕೋವಿಡ್-19 ವೈರಸ್ ಪಿಡುಗು ತೋರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾಗತಿಕ ಪೂರೈಕೆಗಾಗಿ ಒಂದೇ ದೇಶದ (ಚೀನಾ) ಮೇಲೆ ಅವಲಂಬಿತವಾಗುವುದು ಸರಿಯಲ್ಲ ಎಂದು ಅವರು ವಿಶ್ವದ ರಾಷ್ಟ್ರಗಳಿಗೆ ಕರೆ ಸಲಹೆ ಮಾಡಿದ್ದಾರೆ. ಕೊರೊನಾ ವೈರಸ್ ಪಿಡುಗಿನಿಂದ ದೇಶ-ದೇಶಗಳ ನಡುವೆ ಸಂಪರ್ಕಕ್ಕೆ ಅಡ್ಡಿಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಲಿಂಕ್ ಮೂಲಕ ವಿವಿಧ ದೇಶಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯನ್ನು ಮುಂದುವರಿಸಿದ್ದಾರೆ.
ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟ್ಟೆ ಫೆಡರಿಕ್‍ಸೆನ್ ಜೊತೆ ನಿನ್ನೆ ಮಹತ್ವದ ಶೃಂಗಸಭೆ ವೇಳೆ ಮೋದಿ ಕಮ್ಯುನಿಸ್ಟ್ ದೇಶವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ವಿಶ್ವದ ಪೂರೈಕೆ ಜಾಲಕ್ಕಾಗಿ ಒಂದೇ ಮೂಲವನ್ನು (ಚೀನಾ) ಅವಲಂಬಿಸುವುದು ಎಷ್ಟು ಗಂಡಾಂತರಕಾರಿ ಎಂಬುದನ್ನು ಕೊರೊನಾ ಪಿಡುಗು ಸಾಬೀತು ಮಾಡಿದೆ ಎಂದು ಅವರು ತಿಳಿಸಿ, ಇನ್ನಾದರೂ ಇದರ ಮೇಲೆ ಮೇಲೆ ಸಂಪೂರ್ಣ ಅವಲಂಬನೆ ನಿಲ್ಲಬೇಕೆಂದು ತಿಳಿಸಿದ್ದಾರೆ.
ಭಾರತ, ಜಪಾನ್ ಮತ್ತಿತರ ಮಿತ್ರರಾಷ್ಟ್ರಗಳು ಸ್ವಯಂ ಸ್ವಾವಲಂಬನೆ ಸಾಧನೆ ನಿಟ್ಟಿಯಲ್ಲಿ ದೃಢ ಹೆಜ್ಜೆ ಇಟ್ಟಿವೆ. ಬೇರೆ ದೇಶಗಳೂ ಕೂಡ ಮತ್ತೊಂದು ದೇಶದ ಮೇಲೆ ಅವಲಂಬನೆಯಾಗದೇ ದೇಶೀಯ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಮೋದಿ ಕರೆ ನೀಡಿದರು.
ಇಂಡೋ-ಡೆನ್ಮಾರ್ಕ್ ಶೃಂಗಸಭೆಯಲ್ಲಿ ಮೋದಿ ಮತ್ತು ಮೆಟ್ಟೆ ವಿಡಿಯೋ ಲಿಂಕ್ ಮೂಲಕ ಚರ್ಚೆ ನಡೆಸಲಿದ್ದು, ಉಭಯ ದೇಶಗಳ ನಡುವೆ ಪರಸ್ಪರ ಹಿತಾಸಕ್ತಿಗಳಿಗೆ ಪೂರಕವಾಗಿ ವಿಷಯಗಳ ನಡುವೆ ಸಮಾಲೋಚಿಸಿ ಮತ್ತಷ್ಟು ಬಾಂಧವ್ಯ ಬಲವರ್ಧನೆಗೆ ಮುನ್ನುಡಿ ಬರೆದಿದ್ದಾರೆ.
ಹೈನುಗಾರಿಕೆ ಕ್ಷೇತ್ರದಲ್ಲಿ ವಿಶ್ವವಿಖ್ಯಾತವಾದ ಐರೋಪ್ಯ ರಾಷ್ಟ್ರ ಡೆನ್ಮಾರ್ಕ್ ಜೊತೆ ಭಾರತದ ಸಂಬಂಧಕ್ಕೆ 400 ವರ್ಷಗಳ ಇತಿಹಾಸವಿದೆ. ಅಲ್ಲದೆ, 70 ವರ್ಷಗಳಿಂದಲೂ ರಾಜತಾಂತ್ರಿಕ ಬಾಂಧವ್ಯವಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಮೊನ್ನೆ ನಡೆದ ಮಹತ್ವದ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಣ ಬಾಂಧವ್ಯ ಬಲವರ್ಧನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.