” ಆಯೋಧ್ಯೆ ಆಯ್ತು ಈಗ ಮಥುರಾ ” | ಈದ್ಗಾ ಮಸೀದಿ ತೆರವುಗೊಳಿಸಿ ; ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗೊಳಿಸಿ, ಅರ್ಜಿ ವಜಾ – ಕಹಳೆ ನ್ಯೂಸ್
ಮಥುರಾ: ಶ್ರೀ ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈದ್ಗಾ ಮಸೀದಿ ತೆರವುಗೊಳಿಸಬೇಕೆಂದು ಸಲ್ಲಿಕೆಯಾದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
1991ರ ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡಲು ಅಸಾಧ್ಯ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮಥುರಾ ಜಿಲ್ಲಾ ಸಹಾಯಕ ನ್ಯಾಯಾಧೀಶ ಛಯ್ಯಾ ಶರ್ಮಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಕೋರ್ಟ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಕೃಷ್ಣ ಜನ್ಮಸ್ಥಾನ ಪರ ಹೋರಾಟದ ಭಾಗವಾದ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ, ಅ.15ರಂದು ಕೋರ್ಟ್ ಆದೇಶದ ಸಂಬಂಧ ಸಭೆ ನಡೆಯಲಿದೆ. ಅಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ವಶಕ್ಕೆ ಅಗತ್ಯವಿರುವ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಯೋಧ್ಯೆಯ ರಾಮ ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕಾ ತೀರ್ಪು ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿತ್ತು.
ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಶಾಹಿ ಈದ್ಗಾ ಟ್ರಸ್ಟ್‌ನ ನಿರ್ವಹಣಾ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಅರ್ಜಿಯಲ್ಲಿ ಏನಿತ್ತು?
ಮಥುರಾದ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದೆ. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳವಾಗಿದೆ. 1968ರ ರಾಜಿ ಪತ್ರವನ್ನು ಒಪ್ಪಲಾಗದು.
ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್ ಶ್ರೀ ಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವತೆಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. ಕೃಷ್ಣ ಜನಿಸಿದ ಸ್ಥಳವನ್ನು ʼಕತ್ರಾ ಕೇಶವ್ ದೇವ್’ ಎಂದು ಗುರುತಿಸಲಾಗಿದೆ. ಅಯೋಧ್ಯೆಯಂತೆ ಇಲ್ಲೂ ಸಹ ಶ್ರೀಕೃಷ್ಣನ ಜನ್ಮಸ್ಥಳವು ಈದ್ಗಾ ಮಸೀದಿ ಟ್ರಸ್ಟ್‌ನ ನಿರ್ವಹಣಾ ಸಮಿತಿ ರಚಿಸಿರುವ ಸಂರಚನೆಯ ಕೆಳಗೆ ಇದೆ.
ಮಥುರಾದಲ್ಲಿನ ಕೃಷ್ಣ ದೇಗುಲವನ್ನು ಮುಘಲ್ ದೊರೆ ಔರಂಗಜೇಬ್ ಧ್ವಂಸಗೊಳಿಸಿದ್ದ ಎಂಬುದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಗಳು ಸಿಗುತ್ತದೆ. ಕೃಷ್ಣ ಜನ್ಮಭೂಮಿಯಲ್ಲಿದ್ದ ದೇಗುಲವೂ ಸೇರಿದಂತೆ ಅನೇಕ ಹಿಂದೂ ದೇಗುಲಗಳನ್ನು ಔರಂಗಜೇಬ್ ಧ್ವಂಸಗೊಳಿಸಿದ್ದ, ಹೀಗಾಗಿ ಕೃಷ್ಣ ಜನ್ಮಭೂಮಿಯ 13.37 ಎಕರೆ ಪ್ರದೇಶ ಹಿಂದೂಗಳಿಗೆ ಸೇರಿದೆ. ಹೀಗಾಗಿ ಕೃಷ್ಣ ಜನ್ಮಭೂಮಿಯಿಂದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಈ ಜಾಗವನ್ನು ಹಿಂದೂಗಳಿಗೆ ನೀಡಬೇಕೆಂದು ಮನವಿ ಮಾಡಲಾಗಿತ್ತು.