ಅಕ್ಟೋಬರ್ 15 ರಿಂದ ಶಾಲಾ – ಕಾಲೇಜುಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನ್ಲಾಕ್ 5 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಆದರೆ ಈ ಕುರಿತ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ.
ಹೀಗಾಗಿ ರಾಜ್ಯದಲ್ಲಿ ಅಕ್ಟೋಬರ್ 15 ರಿಂದ ಶಾಲಾ – ಕಾಲೇಜುಗಳು ಆರಂಭವಾಗಲಿದೆಯಾ ಎಂಬ ಗೊಂದಲ ಪೋಷಕರನ್ನು ಕಾಡುತ್ತಿದ್ದು, ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಅಕ್ಟೋಬರ್ 15 ರಿಂದ ಶಾಲೆಗಳನ್ನು ಆರಂಭಿಸುವ ಯಾವುದೇ ಧಾವಂತ ಸರ್ಕಾರಕ್ಕಿಲ್ಲ. ಪೋಷಕರ ಅಭಿಪ್ರಾಯವನ್ನು ಸರ್ಕಾರ ಗೌರವಿಸಲಿದ್ದು, ಇನ್ನೂ ಹಲವು ಬಾರಿ ಸಮಾಲೋಚನೆ ನಡೆಸಿದ ಬಳಿಕವೇ ಶಾಲಾ – ಕಾಲೇಜು ಆರಂಭದ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.
ಇದು ನವೆಂಬರ್ ಆಗಬಹುದು ಅಥವಾ ಡಿಸೆಂಬರ್ ಕೂಡಾ ಆಗಬಹುದು. ಕೊರೊನಾ ಕಾಲದಲ್ಲಿ ಮಕ್ಕಳ ರಕ್ಷಣೆ ನಮಗೆ ಅತಿ ಮುಖ್ಯವಾಗಿದ್ದು, ಹೀಗಾಗಿ ಕೂಲಂಕುಷ ಪರಿಶೀಲನೆ ನಡೆಸಿದ ಬಳಿಕವೇ ಶಾಲಾ – ಕಾಲೇಜುಗಳ ಆರಂಭದ ಕುರಿತು ತೀರ್ಮಾನಿಸಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.