ಹತ್ರಾಸ್ಗೆ ಹೊರಟಿದ್ದ ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು;ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಹೈ ಡ್ರಾಮಾ-ಕಹಳೆ ನ್ಯೂಸ್
ಲಖ್ನೋ,ಅ.1- ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಖಂಡಿಸಿ ಹತ್ರಾಸ್‍ನಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉತ್ತರಪ್ರದೇಶದ ಪೊಲೀಸರು ಕೆಲಕಾಲಕ್ಕೆ ವಶಕ್ಕೆ ಪಡೆದುಕೊಂಡರು.
ಯುಮುನಾ ಎಕ್ಸ್‍ಪ್ರೆಸ್ ಹೈವೇ ಮೂಲಕ ಹತ್ರಾಸ್‍ಗೆ ತೆರಳುತ್ತಿದ್ದ ರಾಹುಲ್ ಅವರನ್ನು ಭಾರತೀಯ ದಂಡ ಸಂಹಿತೆ ಕೆಲ ಸೆಕ್ಷನ್‍ಗಳ ಅನ್ವಯ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಪೊಲೀಸರ ನಡುವೆ ವಾದ, ವಾಗ್ವಾದ ನಡೆಯಿತು.ಯಾವ ಸೆಕ್ಷನ್ ಅನ್ವಯ ನನ್ನನ್ನು ನೀವು ತಡೆಯುತ್ತೀದ್ದೀರಿ ಎಂದು ಪ್ರಶ್ನಿಸಿದ ರಾಹುಲ್, ಸೆಕ್ಷನ್ 144ರ ಅನ್ವಯ ಗುಂಪುಗೂಡಬಾರದೆಂಬ ಕಾನೂನು ಇದೆ. ನಾನು ಕಾನೂನನ್ನು ಗೌರವಿಸುತ್ತೇನೆ. ನಾನು ಏಕಾಂಗಿಯಾಗಿ ಹತ್ರಾಸ್‍ಗೆ ತೆರಳುತ್ತಿದ್ದೇನೆ. ಇದರಿಂದ ಯಾವುದೇ ಕಾನೂನು ನಿಯಮ ಉಲ್ಲಂಘನೆಯಾಗುವುದಿಲ್ಲ ಎಂದು ರಾಹುಲ್ ವಾದಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಅಕಾರಿಗಳು ಮತ್ತು ರಾಹುಲ್- ಅವರ ಜೊಗೆಗಿದ್ದ ಕಾಂಗ್ರೆಸ್ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.ಹತ್ರಾಸ್ ಮತ್ತು ಬಲರಾಮ್‍ಪುರ ಪ್ರದೇಶದಲ್ಲಿ ನಡೆದ ದಲಿತ ಯುವತಿ ಮೇಲೆ ನಡೆದ ಕೊಲೆ ಮತ್ತು ಗ್ಯಾಂಗ್‍ರೇಪ್ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.