ಡ್ರಗ್ಸ್ ವಿಚಾರದಲ್ಲಿ ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿರುವ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಬ್ಬರಿಗೂ ಪತ್ರ ಬರೆದು ತನಿಖೆಗೆ ಒತ್ತಾಯಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರೂಪಕಿ ವಿಚಾರದಲ್ಲಿ ಇಂಥದ್ದೇ ವರದಿಗಳು ಬರುತ್ತಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂಬ ವರದಿ ಬಿತ್ತರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಂಬ ವರದಿ ಬರುತ್ತಿವೆ. ಈ ರೀತಿಯ ಕಪೋಲ ಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ಈ ಬಗ್ಗೆ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದರು.
ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರತರಬೇಕು. ಮಾಧ್ಯಮಗಳಿಗೆ ಮಾಜಿ ಮುಖ್ಯಮಂತ್ರಿ ಎಂಬುದನ್ನು ಕೊಟ್ಟವರು ಯಾರು? ಮಾಧ್ಯಮಗಳೇ ಸೃಷ್ಟಿ ಮಾಡಿದ್ದೇ ಆಗಿದ್ದರೆ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನಿರೂಪಕಿ ಅವರ ಕಾಲ್ ಲಿಸ್ಟ್‍ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದವರು ಎಂದೆಲ್ಲಾ ವರದಿಗಳು ಬರುತ್ತಿದೆ. ನಾನು, ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸೇರಿ 6 ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದೇವೆ. ಯಾರು ಆ ಮಾಜಿ ಸಿಎಂ ಎಂಬುದನ್ನಾದರೂ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ಯಾರೋ ಒಬ್ಬರ ತೇಜೋವಧೆ ಮಾಡಲು ಮಾಧ್ಯಮಗಳು ಮುಂದಾದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತಿ ದಿನ ಒಂದೊಂದು ಹೆಸರು ಹೊರ ಬರುತ್ತಿದೆ. ಜನರನ್ನು ದಿಕ್ಕು ತಪ್ಪಿಸಲು ಮಾಧ್ಯಮಗಳೇ ಮಾಡುತ್ತಿವೆಯೇ ಇಲ್ಲವೆ ಸರ್ಕಾರ ಮಾಡುತ್ತಿದೆಯೇ ಎಂಬುದು ಗೊತ್ತಾಗಬೇಕು ಎಂದರು.ಮಂಗಳೂರು ವರದಿಗಾರರನಿಗೆ ಮಾಹಿತಿ ಕೊಟ್ಟವರು ಯಾರು ಎಂದು ಗೊತ್ತಾಗಿದೆ. ಆ ವ್ಯಕ್ತಿ ಸತ್ಯ ಹೇಳಬೇಕು. ಇಲ್ಲವೇ ಆತನನ್ನು ಬಂಸಬೇಕು. ಇಲ್ಲವೇ ಮಾಧ್ಯಮಗಳಿಗೂ ಜವಾಬ್ದಾರಿ ಇರಬೇಕು. ಧೈರ್ಯವಾಗಿ ಯಾರೆಂಬುದನ್ನು ಹೇಳಬೇಕು ಎಂದು ಹರಿಹಾಯ್ದರು.