ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆ ಡ್ರಗ್ಸ್ ಸಂಬಂಧ ಪ್ರಕರಣದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋಯಿಕ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಿ ಎನ್‌ಡಿಪಿಎಸ್ ಕೋರ್ಟ್ ಮಂಗಳವಾರ ಆದೇಶಿಸಿದೆ.
ಮುಂಬೈನ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ನ್ಯಾಯಾಲಯ (ಎನ್‌ಡಿಪಿಎಸ್) ರಿಯಾ ಚಕ್ರವರ್ತಿ ಹಾಗೂ ಅವರ ಸೋದರನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದೆ.
ಈ ಪ್ರಕರಣದಲ್ಲಿ ರಿಯಾ, ಶೋಯಿಕ್ ಅವರಲ್ಲದೆ ಇತರ 18 ಮಂದಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ.
ವರದಿಗಳ ಪ್ರಕಾರ, ಎನ್‌ಸಿಬಿ ತನ್ನ ಸೂಚನೆಯಂತೆ ರಿಯಾ ಹಾಗೂ ಆಕೆಯ ಸೋದರ ಸುಶಾಂತ್ ಗೆ ಹಣಕಾಸು ಮತ್ತು ಡ್ರಗ್ಸ್ ವ್ಯವಸ್ಥೆ ಕಲ್ಪಿಸಿದ್ದರೆಂದು ಹೇಳಿದೆ. ಆದರೆ ರಿಯಾ ಮಾತ್ರ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದಾರೆ.
ಏತನ್ಮಧ್ಯೆ, ಡ್ರಗ್ಸ್ ಪ್ರಕರಣದಲ್ಲಿ ರಿಯಾ, ಶೋಯಿಕ್ ಮತ್ತಿತರರ ಜಾಮೀನು ಅರ್ಜಿಯ ಕುರಿತು ಬಾಂಬೆ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.