ನವದೆಹಲಿ: ಸೋಮವಾರ ಮಥುರಾದಲ್ಲಿ ಹತ್ರಾಸ್ ಜಿಲ್ಲೆಗೆ ಹೊರಟಿದ್ದ ನಾಲ್ವರು ವ್ಯಕ್ತಿಗಳನ್ನ ಪೊಲೀಸರು ಬಂಧಿಸಿದ್ದರು. ಇದೀಗ ಈ ನಾಲ್ವರಿಗೂ ಉಗ್ರ ಸಂಘಟನೆಯಾದ ಪಿಎಫ್ಐನ ನಂಟಿರುವ ಶಂಕೆಯ ಮೇಲೆ ದೇಶದ್ರೋಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಈ ನಾಲ್ವರು ಶಾಂತಿ ಕದಡುವ ಉದ್ದೇಶದಿಂದ ಹತ್ರಾಸ್ಗೆ ಹೋಗುತ್ತಿದ್ದರು ಎಂದು ಪೊಲೀಸರು ಎಫ್ಐಆರ್ನಲ್ಲಿ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನ ಉತ್ತರ ಪ್ರದೇಶದ ಮುಜಾಫರ್ ನಗರದ ಅತೀಕ್ ಉರ್ ರೆಹ್ಮಾನ್, ಬಹರೇಚ್ನ ಮಸೂದ್ ಅಹ್ಮದ್, ರಾಮಪುರ್ನ ಅಲಮ್ ಮತ್ತು ಕೇರಳದ ಮಲಪ್ಪುರಂನ ಸಿದ್ಧಿಕ್ ಎಂದು ಗುರುತಿಸಲಾಗಿದ್ದು, ಇವರ ಬಳಿ ಇದ್ದ ಮೊಬೈಲ್, ಲ್ಯಾಪ್ಟಾಪ್ ಮತ್ತು ಕೆಲ ಪುಸ್ತಕಗಳಿಂದ ಅವರ ಉದ್ದೇಶದ ಸುಳಿವು ಸಿಕ್ಕಿತ್ತು ಎಂದು ಪೊಲೀಸರು ಹೇಳಿದ್ದಾರೆ.