Sunday, November 17, 2024
ಸುದ್ದಿ

ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಗೆ ಕನ್ನ: ಮಂಗಳೂರು ಸಿನಿಮಾ ನಿರ್ಮಾಪಕ ಸೇರಿ ಆರು ಮಂದಿಯ ಬಂಧನ!-ಕಹಳೆ ನ್ಯೂಸ್

ಮಂಗಳೂರು: ನಕಲಿ ಚೆಕ್​ಗಳ ಮೂಲಕ ಆಂಧ್ರ ಪ್ರದೇಶ ಮುಖ್ಯಮಂತ್ರಿಯ ಪರಿಹಾರ ನಿಧಿ ಖಾತೆಗೆ ಕನ್ನ ಹಾಕಿದ ಸಿನಿಮಾ ನಿರ್ಮಾಪಕ ಸೇರಿದಂತೆ ದಕ್ಷಿಣ ಕನ್ನಡ ಮೂಲದ 6 ಮಂದಿಯನ್ನು ಆಂಧ್ರದ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳು ನಕಲಿ ಚೆಕ್​ ಬಳಸಿ 117 ಕೋಟಿ ರೂ. ಹಣ ವಿತ್​​ಡ್ರಾ ಮಾಡಲು ಸಂಚು ರೂಪಿಸಿದ್ದರು. ಇದೊಂದು ಭಾರಿ ದೊಡ್ಡ ಹಗರಣವಾಗಿದ್ದು, ಒಟ್ಟು ಮೂರು ನಕಲಿ ಚೆಕ್​ಗಳನ್ನು ಮಂಗಳೂರು, ಕೋಲ್ಕತ ಮತ್ತು ನವದೆಹಲಿ ಬ್ಯಾಂಕ್​ಗಳಲ್ಲಿ ಡೆಪಾಸಿಟ್​ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಗಳು ನಕಲಿ ಸಹಿಯುಳ್ಳ ಚೆಕ್​ನಿಂದ ಹಣ ಡ್ರಾ ಮಾಡಲು ಯತ್ನಿಸಿದಾಗ ಅನುಮಾನಗೊಂಡ ಎಸ್​ಬಿಐ ಅಧಿಕಾರಿಗಳು ವಿಜಯವಾಡದ ತಲ್ಲೂರು ಮಂಡಲದ ವೆಲಗಪುಡಿಯಲ್ಲಿರುವ ಎಸ್​ಬಿಐ ಮುಖ್ಯ ಕಚೇರಿಯಲ್ಲಿ ಚೆಕ್​ ಕುರಿತು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪರಿಹಾರ ನಿಧಿ ಇಲಾಖೆ ನೀಡಿದ್ದ ಒಂದೇ ಚೆಕ್ ಸಂಖ್ಯೆಗಳನ್ನು ಹೊಂದಿರುವ ನಕಲಿ ಚೆಕ್​ಗಳನ್ನು ಆರೋಪಿಗಳು ಮೂರು ಬ್ಯಾಂಕುಗಳಲ್ಲಿ ಜಮಾ ಮಾಡಿದ್ದರು. ಬಂಧಿತರನ್ನು ಯೋಗೀಶ್​ ಆಚಾರ್ಯ, ಉದಯ್​ ಶೆಟ್ಟಿ ಕಾಂತವರ, ಬ್ರಿಜೆಶ್​ ರೈ, ಗಂಗಾಧರ ರಾವ್​ ಮತ್ತು ಇತರೆ ಇಬ್ಬರು ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ದಕ್ಷಿಣ ಕನ್ನಡ ಮೂಲದವರು. ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಖರಗ್​ಪುರ್​ದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಇಲ್ಲಿಯವರೆಗೆ 9 ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳು ನೋಡಲು ನಿಜವೆಂಬಂತೆ ಕಾಣುವ ನಕಲಿ ಚೆಕ್​ಗಳನ್ನು ಸೃಷ್ಟಿಸಿದ್ದರು ಮತ್ತು ಅವುಗಳನ್ನು ಮೂರು ಬ್ಯಾಂಕ್​ಗಳಲ್ಲಿ ಜಮಾ ಮಾಡಿದ್ದರು. ಭಾರಿ ಮೊತ್ತದ ಹಣದ ವರ್ಗಾವಣೆಯ ಅನುಮಾನದಿಂದ ಎಚ್ಚೆತ್ತ ಎಸ್​ಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಂಚು ಬಯಲಾಗಿದೆ. ತಕ್ಷಣ ಆಂಧ್ರ ಪೊಲೀಸರು ಸಂಪರ್ಕಿಸಿದ್ದಾರೆ. ಬಳಿಕ ಇದೊಂದು ಹಗರಣ ಎಂಬುದು ಬಯಲಾಗಿದೆ. ಇದೇ ವೇಳೆ ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಯ ಎಲ್ಲ ವ್ಯವಹಾರಗಳನ್ನು ಅಮಾನತ್ತಿನಲ್ಲಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

117 ಕೋಟಿ ರೂ.ಗಳನ್ನು ಹಿಂಪಡೆಯಲು ಮೂರು ಜನರಿಗೆ ಮಂಜೂರು ಮಾಡಿದ್ದ ಚೆಕ್ ಅನ್ನು ನಕಲಿ ಮಾಡಿ ಹಣ ಹೊಡೆಯಲು ಹಗರಣಕಾರರು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇತ್ತ ತಮ್ಮ ಪರಿಹಾರ ಖಾತೆಗೆ ಕನ್ನ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಅರಿತ ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ತಕ್ಷಣ ತನಿಖೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಆರೋಪಿ ಯೋಗೀಶ್​ ಆಚಾರ್ಯ 52 ಕೋಟಿ ರೂ. ಮೌಲ್ಯದ ಚೆಕ್​ ಅನ್ನು ಮೂಡಬಿದರೆಯ ಎಸ್​ಬಿಐನಲ್ಲಿ ಡೆಪಾಸಿಟ್​ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದಾಗ್ಯು ಅಕ್ರಮ ವರ್ಗಾವಣೆಗೆ ಬ್ರೇಕ್​ ಬಿದ್ದಿದ್ದು, ಯೋಗೀಶ್​ನನ್ನು ಬಂಧಿಸಲಾಗಿದೆ. ಈತನ ಮಾಹಿತಿ ಆಧಾರದ ಮೇಲೆ ಉಳಿದ ಐವರನ್ನು ಬಂಧಿಸಲಾಗಿದೆ.

ಆರೋಪಿ ಉದಯ್​ ಶೆಟ್ಟಿ ಸಿನಿಮಾ ನಿರ್ಮಾಪಕ
ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಗೆ ಕನ್ನ ಹಾಕಿ ಬಂಧನವಾಗಿರುವ ಉದಯ್​ ಶೆಟ್ಟಿ ಕಾಂತಾವರ್​ ಮಂಗಳುರು ಕೋಸ್ಟಲ್​ವುಡ್​ (ತುಳು ಸಿನಿಮಾ) ನಿರ್ಮಾಪಕ. ಈತ ನಕಲಿ ಚೆಕ್​ನಿಂದ ಮೂಡಬಿದ್ರೆಯಲ್ಲಿ ಹಣ ಡ್ರಾ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಇದೀಗ ಆಂಧ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಕಾಂತಾವರ್​ ತುಳು ಭಾಷೆಯ ಏಸಾ ಸಿನಿಮಾ ನಿರ್ಮಾಪಕ.