ಹಾಥರಸ್ ಘಟನೆ: ಎಫ್‌ಐಆರ್ ಇಲ್ಲ, ಸರ್ಕಾರದ ಪ್ರಶ್ನೆಗೆ ಉತ್ತರವೂ ಇಲ್ಲ. ತನಿಖೆಗೆ ಒಪ್ಪುತ್ತಿಲ್ಲವೆ ಸಿಬಿಐ?-ಕಹಳೆ ನ್ಯೂಸ್
ಲಖನೌ: ಹಾಥರಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಪ್ರಕರಣವನ್ನು ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ಕೋರಿ ಇದಾಗಲೇ ಐದು ದಿನಗಳು ಕಳೆದಿವೆ.
ಆದರೆ ಇದುವರೆಗೂ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಿಲ್ಲ, ಮಾತ್ರವಲ್ಲದೇ ಅಲ್ಲದೇ, ಇದುವರೆಗೆ ಸರ್ಕಾರದಕ್ಕೆ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ಉತ್ತರವನ್ನೂ ನೀಡಿಲ್ಲ ಎನ್ನಲಾಗಿದೆ.
ಈ ಹಿಂದೆ ಸಂತ್ರಸ್ತೆಯ ಕುಟುಂಬಸ್ಥರು ಕೂಡ ಸಿಬಿಐ ತನಿಖೆ ಬೇಡ ಎಂದು ಹೇಳಿದ್ದರು. ಆದರೆ ಇದೀಗ ಸಿಬಿಐ ಪ್ರಕರಣದ ತನಿಖೆ ನಡೆಸುವುದೇ ಅನುಮಾನವಾಗಿದೆ.
ತನಿಖೆಗೆ ಸಂಬಂಧಿಸಿದಂತೆ ಸಿಬಿಐನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಸಂದರ್ಭದಲ್ಲಿ ಸಿಬಿಐನ ಈ ಕ್ರಮವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಲು ಪ್ರಾರಂಭಿಸಿದೆ. ಸರ್ಕಾರದಿಂದ ತನಿಖೆಗೆ ಪ್ರಸ್ತಾವ ಕಳುಹಿಸಲಾಗಿದ್ದರೂ, ಸಿಬಿಐ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ ಸ್ಥಳೀಯ ಪೊಲೀಸರಿಂದ ಮಾಹಿತಿಯನ್ನೂ ಕೇಳಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಸಿಬಿಐ ನೀಡುವ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಸಿಬಿಐ ಮೌನವಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಅದೇ ಇನ್ನೊಂದೆಡೆ, ಇದೇ 12ರಂದು ಈ ಘಟನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಇದಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಮೂವರು ತನಿಖಾ ಸದಸ್ಯರನ್ನು ಒಳಗೊಂಡಿರುವ ತಂಡವಿದು. ಎಸ್‌ಐಟಿ ನೀಡಿರುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಇದಾಗಲೇ ಓರ್ವ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮೊನ್ನೆ ಶನಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಸ್ಥಳಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರನ್ನು ಕಳುಹಿಸಿದ್ದಾರೆ.
ಐದು ದಿನಗಳ ನಂತರವೂ ಸಿಬಿಐ ತನಿಖೆಗೆ ಸ್ಪಂದಿಸಲಿಲ್ಲ. ಮತ್ತೊಂದೆಡೆ, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಗೆ ಹತ್ತು ದಿನಗಳ ಕಾಲಾವಕಾಶ ಕೇಳಿದೆ. ಇದಾಗಲೇ ತನಿಖಾ ತಂಡವು ಕಳೆದ ಗುರುವಾರ ಸಂತ್ರಸ್ತೆಯ ಹಳ್ಳಿಯ 40 ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಘಟನೆ ನಡೆದಿರುವ ಸ್ಥಳದ ಸುತ್ತಲೂ, ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಅಥವಾ ಅಂತ್ಯಕ್ರಿಯೆಯಲ್ಲಿ ಹಾಜರಿದ್ದ ಗ್ರಾಮದ ಜನರು ಇದರಲ್ಲಿ ಸೇರಿದ್ದಾರೆ.