Tuesday, November 19, 2024
ಹೆಚ್ಚಿನ ಸುದ್ದಿ

ವಿದ್ಯಾಗಮ ತಾತ್ಕಾಲಿಕ ಸ್ಥಗಿತ! : ಶಿಕ್ಷಣ ಸಚಿವ ಸುರೇಶ್ ಕುಮಾರ್-ಕಹಳೆ ನ್ಯೂಸ್

ಬೆಂಗಳೂರು:ಕೊರೊನಾ ಕಾರಣದಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗ ಬಾರದೆಂದು ರಾಜ್ಯ ಸರ್ಕಾರ ರೂಪಿಸಿದ್ದ ‘ವಿದ್ಯಾಗಮ’ ಯೋಜನೆ ಮೇಲೂ ಕೋವಿಡ್-19 ಕರಿಛಾಯೆ ಆವರಿಸಿದೆ. ಈ ಯೋಜನೆಯಿಂದಾಗಿ ಶಿಕ್ಷಕರಲ್ಲಿ ಕರೊನಾಂತಕ ಹೆಚ್ಚುತ್ತಿದೆ. ಕೂಡಲೇ ಇದನ್ನು ಸ್ಥಗಿತಗೊಳಿಸಿ ಶಿಕ್ಷಕರ ಹಾಗೂ ಮಕ್ಕಳ ಜೀವ ಉಳಿಸಬೇಕು ಎಂಬ ಒತ್ತಾಯ ರಾಜ್ಯಾದ್ಯಂತ ದಟ್ಟವಾಗಿ ಕೇಳಿಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಕೊನೆಗೂ ನಿರ್ಧಾರ ಕೈಗೊಂಡ ಶಿಕ್ಷಣ ಸಚಿವ ಸುರೇಶ್​ ಕುಮಾರ್​, ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆ ಪುನರ್​ಆರಂಭ ಮತ್ತು ವಿದ್ಯಾಗಮ ವಿರುದ್ಧ ರಾಜ್ಯಾದ್ಯಂತ ಬಹುತೇಕರು ಅಸಮಾಧಾನ ಹೊರಹಾಕಿದ್ದರು. ಸದ್ಯಕ್ಕೆ ಶಾಲೆ ಆರಂಭ ಬೇಡ, ಕರೊನಾದಿಂದ ಶಿಕ್ಷಕರು ಹಾಗೂ ಮಕ್ಕಳ ಜೀವ ಉಳಿಸಿ. ಪ್ರಾಣ ಮೊದಲು, ಕಲಿಕೆ ನಂತರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ವಿಪಕ್ಷಗಳೂ ದ್ವನಿಗೂಡಿಸಿದ್ದವು. ಈ ಕುರಿತು ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವರು, ಯಾವುದೇ ಕಾರಣಕ್ಕೂ ವಿದ್ಯಾಗಮವನ್ನು ನಿಲ್ಲಿಸುವುದಿಲ್ಲ ಎಂದಿದ್ದರು. ಇದಾದ ಮರುದಿನವೇ ನಿಲುವು ಬದಲಿಸಿರುವ ಸಚಿವರು, ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್​ ಹಾಕಿದ್ದಾರೆ.

ಈ ಬಗ್ಗೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ನೀಡಿರುವ ಸುರೇಶ್​ ಕುಮಾರ್, ರಾಜ್ಯದಲ್ಲಿ ಜಾರಿ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ ಕೆಲ ವಲಯಗಳಲ್ಲಿ ನಾನಾ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಸ್ವೀಕಾರ‌ ಹಾಗೂ ಅದರ ಸಮರ್ಪಕ‌ ವಿಶ್ಲೇಷಣೆ‌ ಪೂರ್ಣಗೊಳ್ಳುವವರೆಗೂ ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದ್ದಾರೆ.