ಮುಂಬೈ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐತಿಹಾಸಿಕ ಹೊಸ ಕೃಷಿ ಸುಧಾರಣೆಗಳು ರೈತರನ್ನು ಉದ್ಯಮಿಗಳನ್ನಗಿಸಲು ಸಹಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಬಾಳಾಸಾಹೇಬ್ ವಿಖೆ ಪಾಟಿಲ್ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಪ್ರವರ ಗ್ರಾಮೀಣ ಶೈಕ್ಷಣಿಕ ಸಮಾಜದ ಮರುನಾಮಕರಣ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿದೆ ಎಂದಿದ್ದಾರೆ.
ಕೃಷಿ ಮಸೂದೆಗಳನ್ನು ಐತಿಹಾಸಿಕ ಎಂದು ಹೇಳಿರುವ ಪ್ರಧಾನಿ ಮೋದಿ, “ಕೃಷಿ ಹಾಗೂ ಕೃಷಿಕರನ್ನು ಅನ್ನದಾತರ ಪಾತ್ರದಿಂದ ಉದ್ಯೋಗದಾತ (ಉದ್ಯಮಿ) ರನ್ನಾಗಿಸುವುದಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ” ಎಂದು ಜನತೆಗೆ ತಿಳಿಸಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ ಗಳಲ್ಲಿ ಹೆಚ್ಚಿನ ಪ್ರಮಾಣದ ಹಾಲು, ಸಕ್ಕರೆ, ಗೋಧಿ ಉತ್ಪಾದನೆಯನ್ನು ಉಲ್ಲೇಖಿಸಿರುವ ಮೋದಿ, ಈ ರೀತಿಯ ಸ್ಥಳೀಯ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ ಎಂದಿದ್ದಾರೆ.
ಸ್ವಾತಂತ್ರ್ಯ ನಂತರ ಸರ್ಕಾರಕ್ಕೆ ದೇಶದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯಿತ್ತು. ಆಗ ಉತ್ಪಾದನೆಯೆಡೆಗೆ ಹೆಚ್ಚಿನ ಗಮನವಿತ್ತು. ರೈತರು ಈ ಗುರಿಯನ್ನು ತಲುಪಲು ಶ್ರಮಿಸಿದ್ದರು. ಆದರೆ ಸರ್ಕಾರಗಳು ಹಾಗೂ ನೀತಿಗಳು ರೈತರ ಆದಾಯವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಗಮನ ಹರಿಸಲಿಲ್ಲ. ಜನರು ರೈತರ ಆದಾಯದ ಬಗ್ಗೆ ಮರೆತುಬಿಡುತ್ತಾರೆ. ಆದರೆ ಮೊದಲ ಬಾರಿಗೆ ಯೋಚನೆಯನ್ನು ಬದಲಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.