ದಕ್ಷಿಣ ಕನ್ನಡ: ಖಾಸಗಿ ಶಾಲೆಯ ಆಕರ್ಷಣೆಗೆ ಒಳಗಾಗಿ ಹೆತ್ತವರು ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಕಳುಹಿಸೋದು ಸಾಮಾನ್ಯ. ಶಾಲೆಗೆ ಒಳ್ಳೆ ಸುಣ್ಣ-ಬಣ್ಣ ಬಳಿದು , ಆಕರ್ಷಕವಾಗಿ ಕಾಣುವ ಪ್ರಯತ್ನವನ್ನು ಎಲ್ಲಾ ಖಾಸಗಿ ಶಾಲೆಗಳು ಮಾಡೋದು ಸಾಮಾನ್ಯ. ಆದರೆ ಇದೀಗ ಈ ಪ್ರಯತ್ನವನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬದ ಗ್ರಾಮೀಣ ಭಾಗದಲ್ಲಿರುವ ಶಾಲೆಯೊಂದು ಮಾಡಿ ಸುದ್ಧಿಯಲ್ಲಿದೆ.
ಕಡಬ ತಾಲೂಕು ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಕರ್ಷಣೀಯ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಈ ಸರ್ಕಾರಿ ಶಾಲೆಯ ಗೋಡೆಗೆ ರೈಲು ಬೋಗಿ ಹೋಲುವ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ದಾನಿಗಳ ನೆರವಿನಿಂದ ನಡೆಯುತ್ತಿದೆ. ಶಾಲೆಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ಆಕರ್ಷಣೀಯ ರೀತಿಯಲ್ಲಿ ಬಣ್ಣ ಬಳಿಯುವ ಉದ್ದೇಶದಿಂದ ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯಲಾಗಿದೆ. ಅದಕ್ಕೆ ‘ಮೀನಾಡಿ ಎಕ್ಸ್‌ಪ್ರೆಸ್” ಎಂದು ಹೆಸರಿಡಲಾಗಿದೆ.
ಶಾಲೆಯಲ್ಲಿರುವ ಎರಡು ಕಟ್ಟಡಗಳ ಪೈಕಿ ಮೂರು ಕೊಠಡಿಗಳಿರುವ ಒಂದು ಕಟ್ಟಡದ ಗೋಡೆಯಲ್ಲಿ ರೈಲು ಬೋಗಿಯ ಚಿತ್ತಾರ ಮೂಡಿಸಲಾಗಿದೆ. ಕೊಠಡಿಯ ಒಳಗಡೆ ನಲಿಕಲಿಗೆ ಸಂಬಂದಪಟ್ಟ ಚಿತ್ರವನ್ನೂ ಮಾಡಲಾಗುತ್ತಿದೆ. ಎಂಜಿನ್‍ನಲ್ಲಿ ಎಜುಕೇಶನ್ ಎಕ್ಸ್‌ಪ್ರೆಸ್ ಎಂದು ಬರೆಯಲಾಗಿದೆ. ಜತೆಗೆ ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ ಹಾಕಲಾಗಿದೆ. ಶಾಲೆಯ ಡಿಐಎಸ್‍ಇ ಕೋಡ್‍ನ್ನು ಕೂಡ ಬರೆಯಲಾಗಿದೆ. ಒಂದು ಬದಿಯಿಂದ ರೈಲು ಎಂಜಿನ್ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿಯೇ ಚಿತ್ರ ಬರೆದು ಬಣ್ಣ ಬಳಿಯಲಾಗಿದೆ. ಇದೀಗ ಶಾಲೆಯು ರೈಲು ಬೋಗಿಯಂತೆ ಕಂಗೊಳಿಸುತ್ತಿದೆ. ಕಡಬದ ಲಕ್ಷ್ಮೀ ಆರ್ಟ್ಸ್ ಲಕ್ಷ್ಮೀಶ ಹಾಗೂ ಮಾಧವ ಎಂಬವರ ಕೈಚಳಕದಿಂದ ಮೀನಾಡಿ ಎಕ್ಸ್‍ಪ್ರೆಸ್ಸ್ ಮೂಡಿಬಂದಿದೆ. ಚಾರಣಿಗರ ನೆಚ್ಚಿನ ತಾಣ ಚಿಕ್ಕಬಳ್ಳಾಪುರದ ಗುಡಿಬಂಡೆ; ಈ ಐತಿಹ್ಯ ಸ್ಥಳದ ಉಳಿವಿಗೆ ಮಾಡಬೇಕಿದೆ ಪ್ರಯತ್ನ
ಶಾಲೆಯನ್ನು ಮೀನಾಡಿ ಎಕ್ಸ್‌ಪ್ರೆಸ್ ಎಂದು ಬದಲಾಯಿಸುವುದರ ಹಿಂದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶವನ್ನಿಡಲಾಗಿದೆ. ಪುಟ್ಟಮಕ್ಕಳು ಆಕರ್ಷಣೀಯ ವಸ್ತುಗಳಿಗೆ ಸೆಳೆಯುತ್ತಾರೆ. ಅದರಂತೆ ಸರ್ಕಾರಿ ಶಾಲೆಗೆ ರೈಲು ಬೋಗಿ ಮಾದರಿ ಬಣ್ಣ ಬಳಿಯಲಾಗಿದೆ. ಇದೀಗ ಶಾಲೆಗೆ ಭೇಟಿ ನೀಡುವ ಮಂದಿ ರೈಲು ಬೋಗಿಯ ಬಳಿ ತಮ್ಮ ಪೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಮೀನಾಡಿ ಸರ್ಕಾರಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಶಾಲೆಯು ಉತ್ತಮ ಕಲಿಕಾ ಕೊಠಡಿ, ಶೌಚಾಲಯ, ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಶಾಲಾ ಅಂಗಲಕ್ಕೆ ಇಂಟರ್‍ಲಾಕ್ ಅಳವಡಿಕೆ, ಉದ್ಯಾನವನ ರಚನೆ, ಕಂಪ್ಯೂಟರ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಮುಂತಾದ ಅಭಿವೃಧ್ಧಿ ಕೆಲಸಗಳು ಆಗಬೇಕಾಗಿದೆ ಇದಕ್ಕೆಲ್ಲಾ ದಾನಿಗಳ ನಿರೀಕ್ಷೆಯಲ್ಲಿ ಶಾಲಾಡಳಿತವಿದೆ.
1ರಿಂದ 5ನೇ ತರಗತಿ ಇರುವ ಮೀನಾಡಿ ಶಾಲೆ 3.89ಎಕ್ರೆ ಜಾಗಹೊಂದಿದ್ದು, 1960-61ರಲ್ಲಿ ಸ್ಥಾಪನೆಗೊಂಡು, 2010ರಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಲಾಗಿತ್ತು. ಇದೀಗ 60 ವರ್ಷ ಪೊರೈಸಿರುವ ಈ ಶಾಲೆಯು ವಜ್ರಮಹೋತ್ಸವ ಸಂಭ್ರಮ ಸಿದ್ಧತೆಯಲ್ಲಿದೆ. ಅಂದುಕೊಂಡಂತೆ ನಡೆಯುತ್ತಿದ್ದರೇ ಈಗಾಗಲೇ ಕಾರ್ಯಕ್ರಮ ನಡೆದಿರಬೇಕಾಗಿತ್ತು. ಆದರೆ ಕೊರೋನಾ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು, ಇಲಾಖೆ ಅನುಮತಿ ನೀಡಿದ ತಕ್ಷಣ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದು ಎನ್ನುತ್ತಾರೆ ಮುಖ್ಯಶಿಕ್ಷಕರು.
ಈ ಶಾಲೆಯಲ್ಲಿ ಕಳೆದ ವರ್ಷ 10 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 12ಕ್ಕೆ ಏರಿಕೆಯಾಗಿದೆ. ಇನ್ನೂ 5 ಮಕ್ಕಳು ಸೇರ್ಪಡೆಯಾಗಲಿದ್ದಾರೆ. ಇಲಾಖಾ ಸಿ ಆರ್ ಪಿ ಇದ್ದುಕೊಂಡು ಈ ಶಾಲೆಯಲ್ಲಿ ಏಕೋಪಾದ್ಯಯರಾಗಿ ಕರ್ತವ್ಯ ನಿರ್ವಹಿಸುವ ಗೋವಿಂದ ನಾಯಕ್ ಕಲ್ಪನೆಯ ಕಾರ್ಯಕ್ಕೆ ಶಿಕ್ಷಣ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.