ಮುಂಬೈ: ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಅವರ ಜೀವನಾಧರಿತ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ಶ್ರೀದೇವಿ ಫೆಬ್ರವರಿ 24ರಂದು ದುಬೈನಲ್ಲಿ ಸಾವನ್ನಪ್ಪಿದ್ದರು. ಈಗ ಬಾಲಿವುಡ್ ನ ನಿರ್ದೇಶಕ ಹಂಸಲ ಮೆಹ್ತಾ ಅವರು ಶ್ರೀದೇವಿ ಅವರ ಜೀವನಾಧರಿತ ಸಿನಿಮಾ ಮಾಡಲು ಅಣಿಯಾಗಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೆಹ್ತಾ, ಶ್ರೀದೇವಿ ಇರುವಾಗ ನಾನು ಅವರೊಂದಿಗೆ ನನ್ನ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿಲ್ಲ. ಆದ್ರೆ ಇಂದು ಶ್ರೀದೇವಿ ಜೀವನದ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ನಿರ್ಧರಿಸಿದ್ದೇನೆ ಅಂತಾ ಹೇಳಿದ್ದಾರೆ.
ಸಿನಿಮಾದಲ್ಲಿ ಶ್ರೀದೇವಿ ಅವರ ಪಾತ್ರಕ್ಕೆ ನಟಿ ವಿದ್ಯಾಬಾಲನ್ ಜೀವ ತುಂಬಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಈಗಾಗಲೇ ನಿರ್ದೇಶಕರು ವಿದ್ಯಾ ಬಾಲನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶ್ರೀದೇವಿ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಚಿತ್ರತಂಡ ನಟಿಯ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡ್ರೆ ಫಿಲಂನಲ್ಲಿ ವಿದ್ಯಾ ನಟಿಸುವುದು ಪಕ್ಕಾ ಆಗಲಿದೆ. ಸಿನಿಮಾದಲ್ಲಿ ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ಮಕ್ಕಳಾದ ಖುಷಿ ಹಾಗು ಜಾಹ್ನವಿ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ ಅಂತ ಚಿತ್ರತಂಡ ರಿವೀಲ್ ಮಾಡಿಲ್ಲ.
1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.
1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ `ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.
ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಅಂದರೆ ಫೆಬ್ರವರಿ 24ರಂದು ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಫೆಬ್ರವರಿ 27ರ ರಾತ್ರಿ ಮುಂಬೈಗೆ ತರಲಾಗಿತ್ತು. ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಫೆಬ್ರವರಿ 28ರಂದು ಅಯ್ಯಪ್ಪನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ನೇರವೇರಿದೆ.