ನವದೆಹಲಿ: ಕುಟುಂಬ ಕಲಹದಿಂದಾಗಿ ಅತ್ತೆ- ಮಾವನ ಮನೆಯಿಂದ ಹೊರ ಹಾಕಲ್ಪಟ್ಟ ಮಹಿಳೆಯರ ಪರವಾಗಿ ನಿನ್ನೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ತಮ್ಮ ಅತ್ತೆ-ಮಾವನ ಅಥವಾ ತಮ್ಮ ಪತಿಯ ಜೊತೆ ವಾಸವಿದ್ದ ಸಂಬಂಧಿಕರ ಮನೆಯ ಭಾಗವಾಗಿ ಮಹಿಳೆ ಆ ಮನೆಯಲ್ಲೇ ಉಳಿದುಕೊಳ್ಳಬಹುದು. ಅವರು ಆ ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತಮ್ಮ ಹಕ್ಕು ಸಾಧಿಸಲು ಅರ್ಹರು. ಆ ಮನೆ ಅತ್ತೆ ಮಾವನ ಅಥವಾ ಪತಿಯ ರಕ್ತ ಸಂಬಂಧಿಕರ ಹೆಸರಿನಲ್ಲಿದ್ದರೂ ಸಹ ಸೊಸೆಗೆ ಹಕ್ಕು ಸಾಧಿಸುವ ಅರ್ಹತೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹಲವು ಕುಟುಂಬದಲ್ಲಿನ ಕಲಹಗಳ ಕೇಸ್ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯಪೀಠ ಇಂಥದ್ದೊಂದು ಆದೇಶವನ್ನು ಹೊರಡಿಸಿದ್ದು ಮಹಿಳೆಯರ ಪಾಲಿಗೆ ಇದೊಂದು ವಿಕ್ಟರಿ ಆದೇಶ ಅಂತಲೇ ಹೇಳಲಾಗುತ್ತಿದೆ. ಒಂದು ವೇಳೆ ಮಹಿಳೆಯ ಪತಿ ಮತ್ತು ಪತ್ನಿ ಅವಿಭಕ್ತ ಕುಟುಂಬದಲ್ಲಿ ಇದ್ದು ಅಥವಾ ಪತಿಯ ಸಂಬಂಧಿಕರ ಮನೆಯಲ್ಲಿ ತಮ್ಮ ವಾಸವನ್ನು ಹಂಚಿಕೊಂಡಿದ್ದರೆ ಅಲ್ಲಿಯೂ ಸಹ ಮಹಿಳೆ ತನ್ನ ಹಕ್ಕು ಸಾಧಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅತ್ತೆ ಮಾವನ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಯರು ತಂದೆ ತಾಯಿಯರ ಮನೆಗೆ ವಾಪಸ್ಸಾಗಲು ಬಯಸದ ಮಹಿಳೆಯರ ಪಾಲಿಗೆ ಇದು ಮಹತ್ವದ ಆದೇಶವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.