ಕಾಪು: ವಿವಾಹಕ್ಕೆ ಬಂದಿದ್ದ ಬೆಂಗಳೂರು ಮೂಲದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಪು ಬೀಚ್‌ನಲ್ಲಿ ರವಿವಾರ ಸಂಜೆ 4.30ರ ಸುಮಾರಿಗೆ ನಡೆದಿದೆ.
ಮೃತರನ್ನು ನೆಲಮಂಗಳ ತಾಲೂಕಿನ ಹೇಸರಕಟ್ಟೆಯ ನಿವಾಸಿ ಕಾರ್ತಿಕ್ (21) ಮತ್ತು ರೂಪೇಶ್ (21) ಎಂದು ಗುರುತಿಸಲಾಗಿದೆ. ರೂಪೇಶ್, ಕಾರ್ತಿಕ್, ದಿಲೀಪ್, ಜಯಂತ್, ಲಿಖಿತ್ ಒಟ್ಟು ಐದು ಮಂದಿ ಕಾರಿನಲ್ಲಿ ಬೆಂಗಳೂರಿ ನಿಂದ ಪ್ರವಾಸ ಹೊರಟು ಅ.17ರಂದು ಧರ್ಮಸ್ಥಳಕ್ಕೆ ಬಂದಿದ್ದರು. ರಾತ್ರಿ ಅಲ್ಲಿ ಉಳಿದುಕೊಂಡಿದ್ದ ಇವರು, ಮಧ್ಯಾಹ್ನ ಕಾಪು ಬೀಚ್ ತಲುಪಿದ್ದಾರೆ.
ಬೀಚ್‌ನಲ್ಲಿ ಇವರೆಲ್ಲ ಸಮುದ್ರಕ್ಕೆ ಇಳಿಯಲು ಮುಂದಾದರು. ಆಗ ಅಲ್ಲಿನ ಲೈಪ್ ಗಾರ್ಡ್ ಹಾಗೂ ಸ್ಥಳೀಯ ಮೀನುಗಾರರು ಸಮುದ್ರಕ್ಕೆ ಇಳಿಯ ದಂತೆ ಎಚ್ಚರಿಕೆ ನೀಡಿದರು. ಆದರೂ ಅದನ್ನು ಲೆಕ್ಕಿಸದೆ ಇವರು ಸಮುದ್ರಕ್ಕೆ ಇಳಿದು ಆಟ ಆಡುತ್ತಿದ್ದರೆನ್ನಲಾಗಿದೆ. ಈ ವೇಳೆ ದಿಲೀಪ್, ಜಯಂತ್, ಲಿಖಿತ್ ನೀರಿನಿಂದ ಮೇಲಕ್ಕೆ ಬಂದರು. ಆದರೆ ಅಲೆಗಳ ರಭಸಕ್ಕೆ ಸಿಲುಕಿದ ಕಾರ್ತಿಕ್ ಹಾಗೂ ರೂಪೇಶ್ ಸಮುದ್ರ ಪಾಲಾದರು. ಕೂಡಲೇ ಸ್ಥಳೀಯರು ರೂಪೇಶ್‌ನನ್ನು ಮೇಲಕೆತ್ತಿ ಪ್ರಥಮ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಅದಾಗಲೇ ಅವರು ಮೃತಪಟ್ಟಿದ್ದರು. ನಂತರ ಕಾರ್ತಿಕ್‌ಗಾಗಿ ಹುಡುಕಾಟ ಮುಂದುವರಿಸಲಾಯಿತು. ಸುಮಾರು ಅರ್ಧ ಗಂಟೆಯ ಬಳಿಕ ಕಾರ್ತಿಕ್ ಮೃತದೇಹವು ಅಲ್ಲೇ ಸಮೀಪ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರೂಪೇಶ್ ಬೆಸ್ಕಾಂ ಉದ್ಯೋಗಿಯಾಗಿದ್ದರೆ, ಕಾರ್ತಿಕ್ ಖಾಸಗಿ ಕಂಪೆನಿ ಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈಗಾಗಲೇ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಅವರೆಲ್ಲ ಊರಿನಿಂದ ಕಾಪುವಿಗೆ ಹೊರಟಿದ್ದಾರೆ ಎಂದು ಪೊಲೀಸು ತಿಳಿಸಿದ್ದಾರೆ.
ಲೈಪ್ ಗಾರ್ಡ್ ಸಿಬ್ಬಂದಿಗಳಾದ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋಧರ ಪುತ್ರನ್, ಚಂದ್ರಹಾಸ ಹಾಗೂ ಕರಾವಳಿ ಕಾವಲು ಪಡೆಯ ಹೆಜಮಾಡಿ ಠಾಣೆಯ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ಈ ಬಗ್ಗೆ ಪ್ರಕರಣ ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.