ಪುತ್ತೂರು: ಪಾಠಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ವಿದ್ಯಾರ್ಥಿಗಳ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಆನ್‍ಲೈನ್ ಸ್ಫರ್ಧೆಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 2020-21 ನೇ ಸಾಲಿನ ಆನ್‍ಲೈನ್ ಸ್ಫರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರು, ಕೊರೊನಾದಿಂದಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ವಿದ್ಯಾರ್ಥಿಗಳ ಮನಸ್ಸಿಗೆ ಚೈತನ್ಯ ನೀಡುವ ಉದ್ದೇಶದಿಂದ ಈ ಆನ್‍ಲೈನ್ ಚಟುವಟಿಕೆಗಳು ಪ್ರೇರಣೆಯಾಗಬಹುದು. ಈ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳು ಬಹುಮಾನವನ್ನು ಲೆಕ್ಕಿಸದೆ ಉತ್ಸುಕತೆಯಿಂದ ಪಾಲ್ಗೊಳಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕು.ಸುಶೋಭಿತ ಮಾತನಾಡಿ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಸಮಾನಾಗಿ ಮಹತ್ವವನ್ನು ನೀಡುತ್ತಿದೆ. ಪಾಠದ ಜೊತೆಗೆ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಇಂತಹ ವಿವಿಧ ರೀತಿಯ ಆನ್‍ಲೈನ್ ಸ್ಫರ್ಧೆಗಳು ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ಸ್ಫರ್ಧೆ ಜಗತ್ತಿಗೆ ಅಗತ್ಯ. ಇಂತಹ ಸ್ಫರ್ಧೆಯ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಆನಂದ ಮತ್ತು ಚೈತನ್ಯವನ್ನು ಜೀವಂತವಾಗಿರಿಸಲು ಸಾಧ್ಯವಾಗುವುದು. ಒದಗಿ ಬರುವ ಅವಕಾಶಗಳನ್ನು ಎಂದೂ ಕೈಬಿಡಬಾರದು. ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ಸ್ಫರ್ಧೆಯಲ್ಲಿ ವರ್ಣಚಿತ್ರ ರಚನೆ, ಶಾಸ್ತ್ರೀಯ ಸಂಗೀತ ಗಾಯನ, ಕನ್ನಡ ಕಗ್ಗ ವಾಚನ-ವಿವರಣೆ, ಭಜನೆ, ಸುಂದರ ಹಾರ ತಯಾರಿ, ವರ್ತಮಾನ ಪತ್ರಿಕಾರಚನೆ, ಭಗವದ್ಗೀತಾ ಕಂಠಪಾಠ, ಗೂಡು ದೀಪ ರಚನೆ, ಯಕ್ಷಗಾನದಲ್ಲಿ ಹೊಸತನ, ಇಂಗ್ಲೀಷ್ ಕವನ, ಹಿಂದಿ ಭಾಷಣ, ಏಕಪಾತ್ರಭಿನಯ, ಕಸದಿಂದ ರಸ, ಛದ್ಮವೇಷ, ಕಿರುಚಿತ್ರ ಸ್ಫರ್ಧೆ ಹೀಗೆ ಒಟ್ಟು 15 ವಿವಿಧ ರೀತಿಯ ಸ್ಫರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ನಿಯೋಜಿಸಲಾಗಿದೆ. ಈ ಸ್ಫರ್ಧೆಯು ಅಕ್ಟೋಬರ್ 19 ರಿಂದ ಡಿಸೆಂಬರ್ 10 ರವರೆಗೆ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ನಡೆಯಲಿದೆ.
ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಇಂತಹ ಪೂರಕ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರ ಸುಂದರ ಬದುಕಿಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶ. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಆನ್‍ಲೈನ್ ಸ್ಫರ್ಧೆಗಳ ಮುಖ್ಯ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಕಾರ್ತಿಕ್‍ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಸುಪ್ರೀತ್ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು.