ನವದೆಹಲಿ – ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು , ಮಹತ್ವದ ಘೋಷಣೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
ನವರಾತ್ರಿ ಸಂದರ್ಭದಲ್ಲಿ ಪ್ರಧಾನಿಯವರು ದೇಶವಾಸಿಗಳಿಗೆ ಶುಭ ಸುದ್ದಿಯೊಂದನ್ನು ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿಯವರು ಕೊರೊನಾ ಲಸಿಕೆ ಲಭ್ಯತೆ ಕುರಿತು ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ದೇಶದಲ್ಲಿ ಕಿಲ್ಲರ್ ಕೊರೊನಾ ಆರ್ಭಟ ಗಣನೀಯವಾಗಿ ಇಳಿಯುತ್ತಿರುವ ಸಂದರ್ಭದಲ್ಲಿ ಇಂದು ಸಂಜೆ ಮೋದಿ ಅವರ ಭಾಷಣವೂ ತೀವ್ರ ಕುತೂಹಲ ಕೆರಳಿಸಿದೆ. ಪ್ರತಿ ಬಾರಿ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಮುಖ ಘೋಷಣೆಗಳನ್ನು ಮತ್ತು ಶುಭ ಸಮಾಚಾರಗಳನ್ನು ತಿಳಿಸಿದ್ದರು. ತಾವು ಸಂಜೆ 6 ಗಂಟೆಗೆ ದೇಶವಾಸಿಗಳನ್ನುದ್ದೇಶಿಸಿ ಭಾಷಣ ಮಾಡುವುದು ಇಂದು ಬೆಳಗ್ಗೆ ತಮ್ಮ ಟ್ವೀಟರ್ ಖಾತೆ ಮೂಲಕ ತಿಳಿಸಿದ್ದಾರೆ.
ಪ್ರಧಾನಿಯವರ ಸಂಜೆಯ ಭಾಷಣದತ್ತ ಎಲ್ಲರ ಚಿತ್ತ ನೆಟ್ಟಿದೆ.ಮೋದಿಯವರು ಈಗಾಗಲೇ ಅತಿ ಶೀಘ್ರದಲ್ಲೇ ಕೊರೊನಾ ಲಸಿಕೆ ಲಭ್ಯತೆ ಪ್ರತಿಯೊಬ್ಬರಿಗೂ ಆರೋಗ್ಯ ರಕ್ಷಣೆಯ ಡಿಜಿಟಲ್ ಐಡಿ ನೀಡಿಕೆ ಮತ್ತು ಆರೋಗ್ಯ ಸೇವೆಗಳ ಬಗ್ಗೆ ತಿಳಿಸಿದ್ದರು. ಇವುಗಳ ಬಗ್ಗೆ ಇಂದು ಸಂಜೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಪ್ರಧಾನಿಯವರ ಇಂದಿನ ಭಾಷಣ ಎಲ್ಲರ ಆಸಕ್ತಿಗೆ ಕಾರಣವಾಗಿದೆ.