Friday, September 20, 2024
ಸುದ್ದಿ

ಎಗ್ರಿಕಲ್ಚರಿಸ್ಟ್ – ಪೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ – ರೈತರ ನಿಜವಾದ ಬೇಡಿಕೆ ಅನುಷ್ಠಾನಗೊಳಿಸಲು ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ಅನೇಕ ವರ್ಷಗಳಿಂದ ಸರಕಾರಗಳು ರೈತರಿಗೆ ವಿವಿಧ ಸೌಲಭ್ಯ ನೀಡುತ್ತಾ ಬಂದಿದೆ. ಆದರೆ ನಿಜವಾದ ಬೇಡಿಕೆಯ ಕಡೆಗೆ ಇನ್ನೂ ಸರಕಾರಗಳು ಗಮನಹರಿಸಿಲ್ಲ. ಹೀಗಾಗಿ “ಎಗ್ರಿಕಲ್ಚರಿಸ್ಟ್” ಪೇಸ್ ಬುಕ್ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿ ಸಂಗ್ರಹಿಸಿದ ಅಭಿಪ್ರಾಯವನ್ನು ಸರಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ್ದು ಇದನ್ನು ಅನುಷ್ಠಾನ ಮಾಡಬೇಕು ಎಂದು ಎಗ್ರಿಕಲ್ಚರಿಸ್ಟ್” ಪೇಸ್ ಬುಕ್ ಗುಂಪು ರಾಜಕೀಯ ಪಕ್ಷಗಳನ್ನು ಒತ್ತಾಯ ಮಾಡಿದೆ.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಗ್ರಿಕಲ್ಚರಿಸ್ಟ್” ಪೇಸ್ ಬುಕ್ ಗುಂಪಿನ ಎಡ್ಮಿನ್ ಮಹೇಶ್ ಪುಚ್ಚಪ್ಪಾಡಿ ಸರಕಾರಗಳು ಇದುವರೆಗೆ ರೈತರ ಸಾಲಮನ್ನಾ ಸೇರಿದಂತೆ ವಿವಿಧ ಸೌಲಭ್ಯ ನೀಡುತ್ತಾ ಬಂದಿದೆ. ರೈತರ ಬೇಡಿಕೆ ಇದಿಷ್ಟೇ ಎಂದು ಪಕ್ಷಗಳು, ರಾಜಕೀಯ ನಾಯಕರು ಭಾವಿಸಿದ್ದರೆ ತಪ್ಪಾದೀತು. ಈಗಲೂ ಅನೇಕ ಬೇಡಿಕೆಗಳು ರೈತರಲ್ಲಿದೆ. ಅದು ಆಳುವ ಮಂದಿಯನ್ನು ತಲಪುತ್ತಿಲ್ಲ. ಹೀಗಾಗಿ “ಎಗ್ರಿಕಲ್ಚರಿಸ್ಟ್” ಪೇಸ್ ಬುಕ್ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೇಸ್‍ಬುಕ್‍ನಲ್ಲಿ ಕೃಷಿಕರ ಜತೆ ಪರಸ್ಪರ ಸಂವಹನಕ್ಕಾಗಿ ಆರಂಭಗೊಂಡ ‘ಎಗ್ರಿಕಲ್ಚರಿಸ್ಟ್’ ಗುಂಪಿನಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳೂ ಮಾತ್ರವಲ್ಲ, ದೇಶದ ವಿವಿದೆಡೆಯ ಸೇರಿದಂತೆ ಸುಮಾರು 2.80 ಲಕ್ಷ ಸದಸ್ಯರುಈ ವೇದಿಕೆಯಲ್ಲಿ ಚರ್ಚಿಸುತ್ತಿದ್ದಾರೆ.ಈ ಗುಂಪಿನ ಆಯೋಜನೆಯಲ್ಲಿ ಕೃಷಿಕ ಪರವಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೃಷಿ ಉತ್ಪನ್ನಗಳ ಮಾರಾಟ, ಮಾಹಿತಿ, ಕೃಷಿ ಸಮಸ್ಯೆಗಳ ಚರ್ಚೆ, ವಿಜ್ಞಾನಿಗಳಿಂದ ಸಲಹೆ, ಹಸುಗಳ ಮಾರಾಟ, ಸೋಲಾರ್ ಬಳಕೆ.. ಇತ್ಯಾದಿ ವಿಚಾರಗಳ ಬಗ್ಗೆ ನಿತ್ಯವೂ ಚರ್ಚೆಯಾಗುತ್ತಿದೆ. ಇದೀಗ ರಾಜ್ಯದಲ್ಲಿ ಚುನಾವಣೆ ಸನ್ನಿಹಿತವಾಗಿದೆ. ಚುನಾವಣೆಗೂ ಮುನ್ನ ಪಕ್ಷಗಳು ತಯಾರಿಸುವ ಪ್ರಣಾಳಿಕೆಯಲ್ಲಿ ಕೃಷಿಕರ ಮೂಲ ಆಶಯಗಳಿಗೆ ಸ್ಪಂದಿಸಬೇಕು, ಸೂಕ್ತ ಯೋಜನೆ ಸಿದ್ಧ ಮಾಡಬೇಕು ಎಂಬುದು “ಎಗ್ರಿಕಲ್ಚರಿಸ್ಟ್ ಗುಂಪು”ನ ಉದ್ದೇಶವಾಗಿದೆ ಎಂದರು.

ಜಾಹೀರಾತು

ಗ್ರೂಪಿನ ಮತ್ತೋರ್ವ ಎಡ್ಮಿನ್ ರಮೇಶ್ ದೇಲಂಪಾಡಿ ಮಾತನಾಡಿ ಇಲ್ಲಿ ಯುವಕೃಷಿಕರ ಅಭಿಪ್ರಾಯ ಅಲ್ಲದೆ ಕೃಷಿಕರ ಮೂಲ ಆವಶ್ಯಕತೆ ಏನು ಎಂಬ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೃಷಿ ಕ್ಷೇತ್ರದ ಆವಶ್ಯಕತೆಗಳನ್ನು ತಮ್ಮ ಮುಂದಿಡುತ್ತಿದ್ದೇವೆ. ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಮೊದಲಾದ್ಯತೆಯಾಗಿ ಪರಿಗಣಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.ಮುಂದೆ ಸರಕಾರಗಳು ಯೋಜನೆಗಳನ್ನು ರೂಪಿಸಲು ನೆರವಾಗಬಹುದಾದ ಸಲಹೆಗಳನ್ನು ಕಾರ್ಯಗತಗೊಳಿಸಲು ಬೇಕಾದ ಸಲಹೆ, ಸೂಚನೆಗಳಿಗೆ ಎಗ್ರಿಕಲ್ಚರಿಸ್ಟ್ ಗ್ರೂಪ್ ಸಹಕಾರ ನೀಡಲು ಉತ್ಸುಕವಾಗಿದೆ ಎಂದರು.

ಪ್ರಮುಖ ಬೇಡಿಕೆಗಳು

* ಕೃಷಿ ಬಳಕೆಯ ಪಂಪ್‍ಸೆಟ್‍ಗಳಿಗೆ ದಿನಪೂರ್ತಿ ವಿದ್ಯುತ್ ಸರಬರಾಜು. ಎಲ್ಲಾ ಕೃಷಿಕರ ಒಕ್ಕೊರಲ ಕೂಗು.
* ಎಲ್ಲಾ ಕೃಷಿ ಉತ್ಪನ್ನಗಳಿಗೆ ಪೂರ್ವನಿಗದಿತ – ಅಂದರೆ ಬಿತ್ತನೆ ಸಮಯದ – ಮಾರುಕಟ್ಟೆ ದರ ಘೋಷಣೆ.
* ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ.
* ಇಲಾಖೆಗಳಲ್ಲಿ ರೈತರು ಅಪೇಕ್ಷಿಸುವ ಕೃಷಿ ಸಂಬಂಧಿತ ದಾಖಲೆಗಳು ಒಂದೇ ಪ್ರಮಾಣ ಪತ್ರದಲ್ಲಿರುವಂತೆ (ಏಕದಾಖಲೆ) ವ್ಯವಸ್ಥೆ.
* ಕೃಷಿ ಉತ್ಪನ್ನಗಳ ಧಾರಣೆಗಳು ಇಳಿಕೆಯಾದಾಗ ತಕ್ಷಣ ಬೆಂಬಲ ಬೆಲೆ ಘೋಷಣೆಯಾಗಿ ಕಾರ್ಯರೂಪಕ್ಕೆ ಬರುವಂತೆ ಕ್ರಮ
* ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ, ಸಹಕಾರ.
* ಕೃಷಿಕರ ಅನುಶೋಧನೆಗಳಿಗೆ ಸಹಕಾರ. ಅದನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಕೃಷಿಕರಿಗೆ ಆರ್ಥಿಕ ಬೆಂಬಲ.
* ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಳೆಗಾರ – ಬಳಕೆದಾರರ ನಡುವಿರುವ ‘ಮಧ್ಯವರ್ತಿ’ಗಳ ಸಂಖ್ಯೆಗಳನ್ನು ಕಡಿಮೆಗೊಳಿಸುವುದು.
* ಬಿತ್ತನೆಯ ಪೂರ್ವದಲ್ಲಿ ಸರಕಾರವು ಉತ್ಪನ್ನಕ್ಕಿರುವ ಬೇಡಿಕೆಯನ್ನು ಅಂದಾಜಿಸಿ ಖರೀದಿಯ ಜವಾಬ್ದಾರಿ ತೆಗೆದುಕೊಳ್ಳುವುದು.
* ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆಯ ಅನುಷ್ಠಾನ
* ಮರಳಿ ಕೃಷಿಗೆ ಬರುವ ವಿದ್ಯಾವಂತರಿಗೆ ಪ್ರೋತ್ಸಾಹ, ತಾಂತ್ರಿಕ ಮಾಹಿತಿಗಳ ಲಭ್ಯತೆ.
* ಹಳ್ಳಿ ಉತ್ಪನ್ನಗಳ ಸ್ಥಳೀಯ ಮೌಲ್ಯವರ್ಧನೆಗೆ ಮತ್ತು ಮಾರಾಟಕ್ಕೆ ಆರ್ಥಿಕ ಪ್ರೋತ್ಸಾಹ
* ಪ್ರತೀ ಗ್ರಾಮಮಟ್ಟದಲ್ಲಿ ಕೃಷಿಕರಿಗೆ ಕೃಷಿ ತಾಂತ್ರಿಕ ಮಾಹಿತಿಗಳ ಲಭ್ಯತೆಗೆ ವಿಜ್ಞಾನ ಪದವೀಧರರ ನೇಮಕ.
* ಜಲಮರುಪೂರಣ (Wಚಿಣeಡಿ ಊಚಿಡಿvesಣiಟಿg) ವ್ಯವಸ್ಥೆ ಕಡ್ಡಾಯ ಮಾಡುವುದು.
*ತಾಲೂಕು ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಬೃಹತ್ ದಾಸ್ತಾನು ಕೊಠಡಿಗಳ ನಿರ್ಮಾಣ. ಇದರಿಂದಾಗಿ ಬೆಲೆ ಬರುವ ತನಕ ಕಾದು ಮಾರುಕಟ್ಟೆ ಮಾಡಲು ಅನುಕೂಲ.
* ಹೈನುಗಾರಿಕೆ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ, ಸಹಕಾರ.

ಸುದ್ದಿಗೋಷ್ಠಿಯಲ್ಲಿ ಯುವಕೃಷಿಕ ಮಹೇಶ್ ಪ್ರಸಾದ್ ನೀರ್ಕಜೆ, ಕೃಷಿಕ ಎ ಪಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಕಹಳೆ ನ್ಯೂಸ್