ನವದೆಹಲಿ- ಸಂಘಟನಾ ಚತುರ, ರಾಜಕೀಯ ಚಾಣುಕ್ಯ ಎಂದೇ ಹೆಸರು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ 56ನೇ ಹುಟ್ಟಹಬ್ದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಶುಭಾಷಯ ಕೋರಿದ್ದು, ಭಾರತದ ಪ್ರಗತಿಗೆ ಅವರ ಕೊಡುಗೆ ಮತ್ತು ಸಮರ್ಪಣೆ ಅನನ್ಯವಾದುದು ಎಂದು ಶ್ಲಾಘಿಸಿದ್ದಾರೆ. ಅಮಿತ್‍ಶಾ ಜಿ ಅವರಿಗೆ ಜನ್ಮದಿನದ ಶುಭಾಶಯಗಳು.
ಬಿಜೆಪಿಯನ್ನು ಬಲಪಡಿಸುವ ಷಾ ಅವರ ಪ್ರಯತ್ನಗಳೂ ಗಮನಾರ್ಹ. ಭಾರತದ ಸೇವೆಗಾಗಿ ದೇವರು ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
1964 ರಲ್ಲಿ ಮುಂಬೈಯಲ್ಲಿ ಜನಿಸಿದ ಷಾ ತನ್ನ ಆರಂಭಿಕ ದಿನಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್) ನೊಂದಿಗೆ ಗುರುತಿಸಿಕೊಂಡು ಪಕ್ಷವನ್ನು ಸದೃಢಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಗುಜರಾತ್‍ನಲ್ಲಿ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದು, 2014 ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ಸಂಘಟನೆ ಮೂಲಕ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ಈಶಾನ್ಯ ಭಾಗದಲ್ಲಿ ಪಕ್ಷವನ್ನು ಬಲಪಡಿಸಿ, ಅಧಿಕಾರ ಹಿಡಿಯುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದರಿಂದಲೇ ಬಿಜೆಪಿ ಪಕ್ಷವು ಗೆಲುವು ಸಾಧಿಸಲು ಕಾರಣವಾಯಿತು.