ಲಕ್ನೋ: ಕರೊನಾ ಕರಿಛಾಯೆ ಮೈಸೂರಿನ ವಿಶ್ವವಿಖ್ಯಾತ ದಸರಾ ಆಚರಣೆಯನ್ನು ಮಂಕಾಗಿಸಿದ್ದರೂ, ಅಯೋಧ್ಯೆಯ ದೀಪೋತ್ಸವ ಈ ಸಲ ಎಂದಿಗಿಂತ ವಿಜೃಂಭಣೆಯಿಂದ ನಡೆಯಲಿದ್ದು, ರಾಮನ ಜನ್ಮಕ್ಷೇತ್ರ ಜಗಮಗಿಸಲಿದೆ.
ರಾಮ ಮಂದಿರ ನಿರ್ಮಾಣ ಆರಂಭಗೊಂಡ ಬಳಿಕದ ಮೊದಲ ದೀಪೋತ್ಸವ ಇದಾಗಿರುವುದರಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಸಲದ ದೀಪೋತ್ಸವವನ್ನು ಎಂದಿಗಿಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ, ದೀಪೋತ್ಸವ ಕುರಿತ ಸಮಗ್ರ ವಿವರ ನೀಡುವಂತೆ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವರ್ಷದ ದೀಪೋತ್ಸವಕ್ಕೆ ಜನಸಂದಣಿ ಕಡಿಮೆ ಇದ್ದರೂ ವೈಭವೋಪೇತವಾಗಿರುವಂತೆ ಹಾಗೂ ಅದನ್ನು ವರ್ಚುವಲ್ ಆಗಿ ಜಗತ್ತೇ ನೋಡುವಂತೆ ಆಚರಿಸುವ ಆಸೆಯನ್ನು ಸಿಎಂ ಯೋಗಿ ಹೊಂದಿದ್ದಾರೆ.
ಈ ದೀಪೋತ್ಸವ ಕಾರ್ಯಕ್ರಮವು 2017ರಿಂದ ಯೋಗಿ ಆದಿತ್ಯನಾಥ್ ಅವರಿಂದಲೇ ಆರಂಭಗೊಂಡಿತ್ತು. ಅಂದು ಸ್ಥಳೀಯರು, ಸ್ವಯಂಸೇವಕರು ಹಾಗೂ ಭಕ್ತರು ಸೇರಿ 1.76 ಲಕ್ಷ ದೀಪಗಳನ್ನು ಬೆಳಗಿದ್ದರು. ಕಳೆದ ವರ್ಷದ ದೀಪೋತ್ಸವದಲ್ಲಿ 5.51 ಲಕ್ಷ ದೀಪಗಳನ್ನು ಬೆಳಗಲಾಗಿತ್ತು. ಇದು ಗಿನ್ನೆಸ್ ದಾಖಲೆಗೂ ಪಾತ್ರವಾಗಿತ್ತು.