ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಮುಂದಿನ ಚಿತ್ರಕ್ಕೆ “ರಾಜರಥ’ ಎಂಬ ಶೀರ್ಷಿಕೆಯನ್ನು ಯಾವಾಗ ಇಟ್ಟರೋ, ಅಂದಿನಿಂದಲೇ ಒಂದಷ್ಟು ನಿರೀಕ್ಷೆ ಹುಟ್ಟಿದ್ದು ಸುಳ್ಳಲ್ಲ. “ರಂಗಿತರಂಗ’ ಯಶಸ್ಸಿನ ಬಳಿಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ತಮ್ಮ ಸಹೋದರ ನಿರೂಪ್ ಭಂಡಾರಿ ಎಂದಿನಂತೆ ಈ ಚಿತ್ರದಲ್ಲೂ ಹೀರೋ. ಚಿತ್ರ ತುಂಬಾನೇ ತಡವಾಗಿದೆ. ಆದರೆ, ಅದಕ್ಕೆ ಬಲವಾದ ಕಾರಣವೂ ಇದೆ. ಯಾಕೆ, ಏನು, ಎಂತ ಇತ್ಯಾದಿ ಕುರಿತು ಅನೂಪ್ ಭಂಡಾರಿ :
* “ರಾಜರಥ’ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ತಡವಾಯ್ತಲ್ಲಾ?
ಚಿತ್ರೀಕರಣ ಸಮಯಕ್ಕೆ ಸರಿಯಾಗಿಯೇ ಆಗಿದೆ. ಆದರೆ, ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿರುವುದರಿಂದ ಸ್ವಲ್ಪ ಸಮಯ ಹಿಡಿಯಿತು. ಕಳೆದ ತಿಂಗಳ 16ರಂದೇ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ, ತೆಲುಗು ಭಾಷೆಯಲ್ಲಿ ರೆಡಿಯಾಗಿರುವ ಚಿತ್ರಕ್ಕೆ ಸೆನ್ಸಾರ್ ಆಗಿರಲಿಲ್ಲ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಒಟ್ಟಿಗೆ ಬಿಡುಗಡೆ ಮಾಡುವ ಯೋಚನೆ ಇತ್ತು. ಫೆಬ್ರವರಿ 23 ಪ್ಲಾನ್ ಆಯ್ತು. ಆಗ “ಟಗರು’ ರಿಲೀಸ್ ಆಯ್ತು. ಆಮೇಲೆ ಬರೋಣ ಅಂದರೆ, ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಎಲ್ಲಾ ಪಿವಿಆರ್ ಬುಕ್ ಆಗಿತ್ತು. ಆಮೇಲೆ ಎಕ್ಸಾಂ ಶುರುವಾಯ್ತು. ನಂತರ ಯುಎಫ್ಓ, ಕ್ಯೂಬ್ ಸಮಸ್ಯೆ ಎದುರಾಯ್ತು. ಇದು ಬಿಡುಗಡೆ ಲೇಟ್ ಆಗಲು ಕಾರಣ. ಈಗ ಮಾರ್ಚ್ 23ಕ್ಕೆ ಪಕ್ಕಾ ಬಿಡುಗಡೆ ಆಗುತ್ತಿದೆ.
* ಕನ್ನಡ ಓಕೆ, ತೆಲುಗು ಮಾಡಿದ್ದು ಯಾಕೆ?
ಮೊದಲು ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕಥೆ ಯೂನಿರ್ವಸಲ್ ಅನಿಸಿತು. ನಿರ್ಮಾಪಕರು ಸಹ ತೆಲುಗಿಗೂ ಮಾಡೋಣ ಅಂದ್ರು. “ರಂಗಿತರಂಗ’ ಚಿತ್ರವನ್ನು ತೆಲುಗಿನಲ್ಲಿ ಅವರೇ ವಿತರಣೆ ಮಾಡಿದ್ದರು. ತೆಲುಗಿನಲ್ಲೂ ಆ ಚಿತ್ರವನ್ನು ಜನ ಇಷ್ಟಪಟ್ಟಿದ್ದರು. ಹಾಗಾಗಿ ತೆಲುಗಿನಲ್ಲೂ ಯಾಕೆ ಪ್ರಯತ್ನ ಮಾಡಬಾರದು ಅನಿಸಿತು. ನಮ್ಮ ಪ್ರಯತ್ನಕ್ಕೆ ನಿರ್ಮಾಪಕರು ಸಾಥ್ ಕೊಟ್ಟರು.
* ಸಹಜವಾಗಿಯೇ ಬಜೆಟ್ ಜಾಸ್ತಿಯಾಗಿರಬೇಕು?
ದೊಡ್ಡ ಬಜೆಟ್ ಅಂತೇನಿಲ್ಲ. ಆದರೆ, ಕನ್ನಡ ಮತ್ತು ತೆಲುಗು ಈ ಎರಡು ಭಾಷೆಯಲ್ಲಿ ತಯಾರಾಗಿದೆ. ಅದರಲ್ಲೂ, ತೆಲುಗು ಮಾರ್ಕೆಟ್ ಜಾಸ್ತಿ ಇದೆ. ಕನ್ನಡ ಒಂದೇ ಆಗಿದ್ದರೆ, ನಮ್ಮ ಬಜೆಟ್ ಚೌಕಟ್ಟು ಮೀರುತ್ತಿರಲಿಲ್ಲ. ತೆಲುಗು ಭಾಷೆಯಲ್ಲೂ ತಯಾರಾಯಿತು. ಅಲ್ಲಿನ ಮಾರ್ಕೆಟ್ ದೊಡ್ಡದು. ಅದಕ್ಕೆ ತಕ್ಕಂತೆಯೇ ಮೇಕಿಂಗ್ ಮಾಡಬೇಕು. ಚಿತ್ರೀಕರಣಕ್ಕೆ ಜಾಸ್ತಿ ದಿನಗಳು ಬೇಕಾಯಿತು. ತಂತ್ರಜ್ಞರ ತಂಡವೂ ದೊಡ್ಡದಿತ್ತು. ಅವರ ಪೇಮೆಂಟ್ ಹೆಚ್ಚಾಯ್ತು. ಹಾಗಾಗಿ ಒಂದು ಹಂತದಲ್ಲಿ ಬಿಗ್ ಬಜೆಟ್ ಆಗಿದೆ ಅಂದರೆ ಒಪ್ಪಬೇಕು.
* ಕಮಲ್ ಹಾಸನ್ ಅವರ ಹಾಡೊಂದು ಇಲ್ಲಿ ರೀಮಿಕ್ಸ್ ಆಗಿದೆಯಲ್ಲಾ?
ಕಮಲ್ ಹಾಸನ್ ಅವರು ಈ ಹಿಂದೆ “ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ “ಮುಂದೆ ಬನ್ನಿ …’ ಎಂಬ ಹಾಡಿಗೆ ನಟಿಸಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಹಾಡದು. ಅದೇ ಹಾಡನ್ನು ಇಲ್ಲಿ ಪುನಃ ಹಾಡಲಾಗಿದೆಯಷ್ಟೇ. ಅದು ಕಥೆಗೆ ಪೂರಕವಾಗಿಯೂ ಇದೆ. ಯಾಕೆ ಬರುತ್ತೆ ಎಂಬುದಕ್ಕೆ ಚಿತ್ರ ನೋಡಬೇಕು.
* ಭಾರತದ ಜನಪ್ರಿಯ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರಲ್ಲ?
ಹೌದು, ಇಂಡಿಯಾದ ಟಾಪ್ ಟೆಕ್ನೀಷಿಯನ್ಸ್ ಇಲ್ಲಿ ಕೆಲಸ ಮಾಡಿದ್ದಾರೆ. ಆರ್ಟ್ ಡೈರೆಕ್ಟರ್ ಆಗಿ ರಜತ್ ಪತ್ತಾರ್, ಸೌಂಡ್ ಮಿಕ್ಸಿಂಗ್‌ನಲ್ಲಿ ರಾಜಾ ಕೃಷ್ಣಂ, ಕೋರಿಯೋಗ್ರಾಫರ್ ಆಗಿ ಬಾಕ್ಸೋ ಸೀಜರ್, ಜಾನಿ ಮಾಸ್ಟರ್, “ಮಗಧೀರ’, “ಬಾಹುಬಲಿ’, “ದೃಶ್ಯಂ’, “ರಂಗಿತರಂಗ’ ಚಿತ್ರಗಳ ಕಲರಿಸ್ಟ್ ಶಿವ ಸೇರಿದಂತೆ ಅನೇಕರು ಇಲ್ಲಿ ಕೆಲಸ ಮಾಡಿದ್ದಾರೆ.