Saturday, November 23, 2024
ಸುದ್ದಿ

ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ-ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ.31ರಂದು ನಿರ್ವಹಣೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಾಗಿ ಗುತ್ತಿಗೆ ಪಡೆದಿರುವ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಕಂಪೆನಿ ಜತೆ ವಿಮಾನ ಯಾನ ಸಚಿವಾಲಯದ ಒಪ್ಪಂದವು ಗುರುವಾರ ಆಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಒಪ್ಪಂದದಂತೆ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಅದಾನಿ ಕಂಪೆನಿ ನಿರ್ವಹಿಸಲಿದೆ. ಕೆಲ ತಿಂಗಳ ಕಾಲ ವಿಮಾನ ನಿಲ್ದಾಣದ ನಿರ್ದೇಶಕರು ಮುಂದುವರಿಯಲಿದ್ದು, ಬಳಿಕ ಅದಾನಿ ಕಂಪೆನಿಯು ಮುಖ್ಯಸ್ಥ ಹುದ್ದೆಗೆ ತನ್ನ ಅಧಿಕಾರಿಯನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ವಿಮಾನ ನಿಲ್ದಾಣ ಪ್ರಾಧಕಾರದಿಂದ ನಿರ್ವಹಣೆಗೊಳ್ಳುತ್ತಿದ್ದ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ಸರಕಾರ ಅದಾನಿ ಗ್ರೂಪ್‌ಗೆ 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. 2018ರ ಡಿಸೆಂಬರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಲಾಗಿತ್ತು. 2019ರ ಜುಲೈನಲ್ಲಿ ಕೇಂದ್ರ ಸರಕಾರ ಅನುಮೋದನೆ ನೀಡಿ, 2020ರ ಫೆಬ್ರವರಿಯಲ್ಲಿ ಅದಾನಿ ಸಂಸ್ಥೆಯ ಜತೆಗೆ ಕೇಂದ್ರ ವಿಮಾನ ನಿಲ್ದಾಣ ಒಪ್ಪಂದ ಮಾಡಿ ಮುಂದಿನ 50 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಅದಾನಿ ಸಂಸ್ಥೆಯು ಬಳಿಕ ಇತರ ನಿರ್ವಹಣೆಗಾಗಿ ಜರ್ಮನಿಯ ಕಂಪೆನಿ ಜತೆಗೆ ಹೊರಗುತ್ತಿಗೆ ಮಾಡಲಿದೆ.

ಇದೀಗ ಒಪ್ಪಂದದ ಆಡಳಿತಾತ್ಮಕ ಪ್ರಕ್ರಿಯೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ಅದಾನಿ ಸಂಸ್ಥೆಗೆ ಹಸ್ತಾಂತರವಾದರೂ, ಮುಂದಿನ ಒಂದು/ಎರಡು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಸಮಾನಾಂತರ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸಮಯದಲ್ಲಿ ನಿಲ್ದಾಣ ಸಂಬಂಧಿತ ವಿಚಾರದಲ್ಲಿ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟ ಎಲ್ಲ ವ್ಯವಹಾರವನ್ನೂ ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ.

ಪ್ರಾಧಿಕಾರವು ವಿಮಾನ ಆಗಮನ-ನಿರ್ಗಮನದ ವಿಚಾರಕ್ಕೆ ಆದ್ಯತೆ ನೀಡಿ ಒಟ್ಟು ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕ ಸ್ಥಾನದಲ್ಲಿರಲಿದೆ. ಏರ್‌ಲೈನ್ಸ್ ಸಂಸ್ಥೆಯವರು ಇಲ್ಲಿಯವರೆಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬಾಡಿಗೆ ನೀಡುತ್ತಿದ್ದರೆ ಹಸ್ತಾಂತರವಾದ ಬಳಿಕ ಈ ವ್ಯವಹಾರವನ್ನು ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ. ಸದ್ಯ ಕರ್ತವ್ಯದಲ್ಲಿರುವ ಉದ್ಯೋಗಿಗಳು ಯಥಾಸ್ಥಿತಿಯಂತೆ ಮುಂದುವರಿಯದ್ದಾರೆ. ಒಂದು ವರ್ಷದ ಬಳಿಕ ಹೊಸ ನೇಮಕಾತಿಯನ್ನು ಅದಾನಿ ಸಂಸ್ಥೆ ನಡೆಸುವ ಸಾಧ್ಯತೆಯಿದೆ.

ಅದಾನಿ ಸಂಸ್ಥೆಗೆ ಪೂರ್ಣವಾಗಿ ಹಸ್ತಾಂತರವಾದ ಬಳಿಕ ವಿಮಾನ ಆಗಮನ-ನಿರ್ಗಮನದ ಉಸ್ತುವಾರಿ ಮಾತ್ರ ಪ್ರಾಧಿಕಾರ ನೋಡಿಕೊಳ್ಳಲಿದೆ. ಹೀಗಾಗಿ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಹಾಗೂ ಕಮ್ಯುನಿಕೇಶನ್ ಆಯಂಡ್ ನೇವಿಗೇಶನ್ ಸೆಂಟರ್‌ಗೆ ಪ್ರಾಧಿಕಾರವೇ ಉಸ್ತುವಾರಿ ನೋಡಿಕೊಳ್ಳಲಿದೆ. ಉಳಿದಂತೆ ಭದ್ರತಾ ಸಿಬ್ಬಂದಿ ಹಾಗೂ ಏರ್‌ಲೈನ್ ಸಿಬಂದಿ ಹೊರತುಪಡಿಸಿ ಟರ್ಮಿನಲ್ ಕಟ್ಟಡ, ರನ್ ವೇ, ಎಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಎಲ್ಲ ವಿಚಾರವನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

ವಿಮಾನ ನಿಲ್ದಾಣದ ಆಸ್ತಿ ಪರಿಶೀಲನೆ, ಸಿಬ್ಬಂದಿ ಕೆಲಸ ಕಾರ್ಯ, ಆದಾಯದ ಮೂಲ, ಏರ್‌ಲೈನ್ ಸಂಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಒಟ್ಟು ವಿಚಾರಗಳ ಬಗ್ಗೆ ಕಳೆದ ಒಂದೆರಡು ತಿಂಗಳಿನಿಂದ ಅದಾನಿ ಸಂಸ್ಥೆಯ ಸುಮಾರು 25 ಉನ್ನತ ಅಧಿಕಾರಿಗಳ ಪ್ರಮುಖರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಧ್ಯಯನ ಮಾಡಿದ್ದಾರೆ. ವಿಮಾನ ನಿಲ್ದಾಣ ನಿರ್ದೇಶಕ ಹುದ್ದೆ ಕೆಲವು ತಿಂಗಳು ಮಾತ್ರ ಜಾರಿಯಲ್ಲಿರಲಿದ್ದು, ಬಳಿಕ ಅದಾನಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಉಸ್ತುವಾರಿ ನೋಡಿಕೊಳ್ಳುವ ನಿರೀಕ್ಷೆಯಿದೆ.

ಅದಾನಿ ಸಂಸ್ಥೆ ಅಧಿಕೃತವಾಗಿ ನಿರ್ವಹಣಾ ಜವಾಬ್ದಾರಿ ಕೈಗೊಂಡ ಬಳಿಕ ಕೋಟ್ಯಂತರ ರೂ. ಹೂಡಿಕೆ ಮಾಡುವ ಸಾಧ್ಯತೆಯಿದೆ. ಬಹು ನಿರೀಕ್ಷೆಯ ರನ್‌ವೇ ವಿಸ್ತರಣೆ, ಹೊಸದಿಲ್ಲಿ-ಮುಂಬಯಿ ಏರ್‌ಪೋರ್ಟ್ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್‌ಗಳು ಬರಲಿವೆ. ಪ್ರಯಾಣಿಕರಿಗೆ ವಿಧಿಸುವ ಶುಲ್ಕದ ಪ್ರಮಾಣ, ಟರ್ಮಿನಲ್ ಒಳಗಿನ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.