Recent Posts

Friday, November 22, 2024
ಕಾಸರಗೋಡುರಾಜ್ಯಸುದ್ದಿ

ಎಡನೀರು ಮಠದ ನೂತನ ಯತಿಗಳಿಗೆ ಕಾಂಚಿ ಶ್ರೀಗಳಿಂದ ಸನ್ಯಾಸ ದೀಕ್ಷೆ ; ಶ್ರೀ ಶ್ರೀ ಶ್ರೀ ಸಚ್ಚಿದಾನಂದಭಾರತಿ ಸ್ವಾಮಿಗಳು ನಾಳೆ ಎಡನೀರು ಮಠಕ್ಕೆ, ಅಕ್ಟೋಬರ್ 28ರಂದು ಪಟ್ಟಾಭಿಷೇಕ – ಕಹಳೆ ನ್ಯೂಸ್

ಎಡನೀರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟಿರುವ ಜಯರಾಮ ಮಂಜತ್ತಾಯ ಅವರ ಸನ್ಯಾಸ ಧೀಕ್ಷೆ ಕಾರ್ಯಕ್ರಮ ಕಾಂಚಿ ಕಾಮಕೋಟಿ ಪೀಠದ ಜಗದ್ಗುರುಗಳಿಂದ ನೆರವೇರಲ್ಪಟ್ಟಿತು. ಕಾಂಚಿ ಶ್ರೀಗಳಿಂದ ನೂತನ ಪೀಠಾಧಿಪತಿಗಳಿಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಎಂದು ನಾಮಕರಣವಾಗುವುದರೊಂದಿಗೆ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಜಯರಾಮ ಮಂಜತ್ತಾಯರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರಿ ಶ್ರೀಮತಿ ಸಾವಿತ್ರಿ ಮತ್ತು ಶ್ರೀನಾರಾಯಣ ಕೆದಿಲಾಯ ದಂಪತಿಗಳಿಗೆ 08-03-1970 ರಲ್ಲಿ ಜನಿಸಿದರು. ಬಾಲ್ಯದಲ್ಲೇ ಜಯರಾಮರನ್ನು ಕೇಶವಾನಂದ ಭಾರತೀಯವರ ತಾಯಿ 1982 ರಲ್ಲಿ ದತ್ತು ತೆಗೆದುಕೊಂಡು ಮಂಜತ್ತಾಯ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದರು. ತನ್ನ ಪ್ರಾಥಮಿಕ ಮತ್ತು ಪ್ರೌಢ ವಿಧ್ಯಾಭ್ಯಾಸವನ್ನು ಎಡನೀರಿನ ಮಠದ ಶಾಲೆಯಲ್ಲೇ ನಡೆಸಿದ ಅವರು ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು. ವೇದಾಧ್ಯಯನದಲ್ಲಿ ಋಗ್ವೇದ ಮತ್ತು ಯಜುರ್ವೇದ ಎರಡೂ ಶಾಖೆಗಳ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದವರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಯತಿಗಳ ಧೀಕ್ಷಾ ಪೂರ್ವ ಕಾರ್ಯಕ್ರಮಗಳು:

ಎಡನೀರು ಮಠದ ನೂತನ ಯತಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿಯಾಗಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳನ್ನು ( ಸುಮಾರು150 ಕ್ಷೇತ್ರ ) ಸಂದರ್ಶಿಸಿ ಎಲ್ಲಾ ದೈವ ದೇವರ ಅನುಗ್ರಹವನ್ನು ಪಡೆದು, ಸಕಲ ಜನರ ಪ್ರೀತಿ ಪೀಠದ ಮೇಲಿನ ಶ್ರದ್ಧೆ ಮತ್ತು ವಿಶ್ವಾಸಗಳನ್ನು ಅಂಗೀಕರಿಸಿ ದ್ವೈತಾದ್ವೈತ, ವಿಶಿಷ್ಟಾದ್ವೈತ ಪರಂಪರೆಯ ಪೀಠಾಧಿಪತಿಗಳ ಆಶೀರ್ವಾದವನ್ನು ಪಡೆದು ಅಕ್ಟೊಬರ್ 19 ರಿಂದಲೇ ಎಡನೀರು ಮಠದಲ್ಲಿ ನುರಿತ ವೈದಿಕ ವಿದ್ವಾ0ಸರಿಂದ ಋಗ್ವೆದ, ವಾಲ್ಮೀಕಿ ರಾಮಾಯಣ ಪಾರಾಯಣ, ಋಗ್ವೆದ ಪವಮಾನ ಹೋಮ, ಸನ್ಯಾಸ ಕರ್ಮಾಧಿಕಾರ ಕಾರ್ಯಕ್ರಮ ಪ್ರಾರ0ಭವಾಗಿ, 20 ರಂದು ದೇವ, ಋತು, ದಿವ್ಯ, ಮನುಷ್ಯ, ಶ್ರಾದ್ಧಾದಿಗಳು, ಮುಂದುವರಿದು ಅ.22 ರಂದು ಭೂತ, ಪಿತೃ, ಮಾತೃ, ಆತ್ಮಶ್ರಾದ್ಧಾದಿಗಳನ್ನು ಪೂರೈಸಿದರು. ಋಗ್ವೆದ ಪಾರಾಯಣದೊಂದಿಗೆ ಕಾರ್ಯಕ್ರಮ ಪೂರ್ಣಗೊಂಡವು. ಅ.23 ರಂದು ರಾಮಾಯಣ ಪಾರಾಯಣ, ಗುರುವಂದನೆ, ದೇವತಾರ್ಚನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಅ.24ರಂದು ರಾಮಾಯಣ ಪಾರಾಯಣ ಮತ್ತು ಕ್ರಷ್ಣ ಯಜುರ್ವೇದ ಪಾರಾಯಣವನ್ನು ಭಕ್ತಿ ಶ್ರದ್ಧೆಯಿಂದ ನಡೆಸಿ ಕಂಚಿಗೆ ಪ್ರಯಾಣ ಬೆಳೆಸಲಾಯಿತು .

ಕಂಚಿ ಕಾಮಕೋಟಿ ಮಠದಲ್ಲಿ ಅ.25ರಂದು ಕಾಮಕೋಟಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ ಮತ್ತು ನಿರ್ದೇಶನದಂತೆ ಅನುಜ್ಞಾ ಕಲಶ, ಪುಣ್ಯವಾಚನಮ್ ವಷಣಂ ಸಂಕಲ್ಪ ಮತ್ತು ಸಾಮವೇದ ಪಾರಾಯಣ ಕಾರ್ಯಕ್ರಮಗಳೊಂದಿಗೆ ಸಾಯಂಕಾಲ ಅಗ್ನಿ ಪ್ರತಿಷ್ಠೆ ಮಾಡಿ ಪೂರ್ಣಾಹುತಿ ಯೊಂದಿಗೆ ಜಾಗರಣೆ ಯಲ್ಲಿರಲಾಯಿತು.

ಪ್ರಣವೋಪದೇಶ .
ಇಂದು (ಅ.26) ಕಂಚಿ ಕಾಮಕೋಟಿ ಮಠದಲ್ಲಿ, ಕಾಮಕೋಟಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ ಮತ್ತು ನಿರ್ದೇಶನದಂತೆ ವಿರಜಾ ಹೋಮ, ಪ್ರಾಥರನುಷ್ಠಾನಗಳನ್ನು ನೆರವೇರಿಸಿ ಜಯರಾಮ ಮಂಜತ್ತಾಯರು “ಸನಾತನ ಧರ್ಮದ ಉನ್ನತಿಗಾಗಿ ತಮ್ಮ ಸನ್ಯಾಸ ಧರ್ಮದ ಪರಿಪಾಲನೆಯ ಕೈಂಕರ್ಯಕ್ಕೆ ಬಂಧು ಬಾಂಧವರಿಂದ ಅಡೆತಡೆಯಾಗಬಾರದು” ಎಂದು ವಿನಂತಿಸಿದರು. ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನು ತ್ಯಜಿಸಿದರು. ಬಳಿಕ, ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶ್ರೀಶ್ರೀಶ್ರೀ ಶಂಕರ ವಿಜಯೇಂದ್ರಸರಸ್ವತಿ ಮಹಾಸ್ವಾಮಿಗಳು ಕಾಷಾಯ ವಸ್ತ್ರ, ದಂಡ ಕಮಂಡಲಗಳನ್ನು ಜಯರಾಮ ಮಂಜತ್ತಾಯರಿಗೆ ನೀಡುವ ಮೂಲಕ ಸನ್ಯಾಸ ದೀಕ್ಷೆ ದಯಪಾಲಿಸಿದರು.
ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಪ್ರಣವೋಪದೇಶ ಮಹಾವಾಕೋಪದೇಶ ಅನುಗ್ರಹಿಸಿದರು. “ಅಯನಾತ್ಮ ಬ್ರಹ್ಮಾಸಿ” ಎಂಬ ಎಡನೀರು ಪೀಠದ ಆಧ್ಯಾತ್ಮಿಕ ವಾಕ್ಯವನ್ನು ನೂತನ ಯತಿಗಳಿಗೆ ಉಪದೇಶಿಸಿದರು.

ಬ್ರಹ್ಮಕ್ಯರಾದ ಶ್ರೀ ಶ್ರೀ ಶ್ರೀ ಈಶ್ವರಾನಂದ ಭಾರತಿ ಯವರಿಂದ ಸನ್ಯಾಸತ್ವವನ್ನು ಪಡೆದು ಅವರು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಬ್ರಹ್ಮಕ್ಯರಾದ ಶ್ರೀ ಶ್ರೀಶ್ರೀ ಕೇಶವಾನಂದಭಾರತಿ ಮಹಾಸ್ವಾಮಿಗಳ ಗುರುತರ ಜವಾಬ್ದಾರಿಯನ್ನು ನೆಚ್ಚಿನ ಶಿಷ್ಯ ಜಯರಾಮ ಮಂಜತ್ತಾಯರಿಗೆ ನೀಡುತ್ತಿದ್ದೇನೆ. ತಮ್ಮ ಗುರುಗಳಾದ ಶ್ರೀ ಶ್ರೀ ಶ್ರೀ ಜಯೇಂದ್ರ ಸರಸ್ವತಿ ಮತ್ತು ಎಲ್ಲಾ ಪೂರ್ವ ಪರಂಪರೆಯ ಗುರುಗಳ ಅನುಜ್ಞೆಯೊಂದಿಗೆ ಆಶೀರ್ವಾದವನ್ನು ಬೇಡುತ್ತಿದ್ದೇನೆ ಎಂದು ಕಾಂಚಿ ಶ್ರೀಗಳು ಪ್ರಾರ್ಥಿಸಿಕೊಂಡರು.

ಶಿಷ್ಯ ಸ್ವೀಕಾರ ಮಹೋತ್ಸವದ ವಿಧಿ ವಿಧಾನಗಳು :

ಎಡನೀರು ಮಠದ ನೂತನ ಯತಿಗಳು ಪುಷ್ಪ, ಗಂಧ, ಅಕ್ಷತೆ ಹಾಗೂ ನಾಣ್ಯಗಳ ಮೂಲಕ ಕಂಚಿ ಕಾಮಕೋಟಿ ಪೀಠದ ಯತಿಗಳಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಪಾದಪೂಜೆ ನೆರವೇರಿಸಿ ನಮಸ್ಕರಿಸಿದರು. ಬಳಿಕ ಶ್ರೀಶ್ರೀಶ್ರೀ ಶಂಕರ ವಿಜಯೇಂದ್ರಸರಸ್ವತಿ ಮಹಾಸ್ವಾಮಿಗಳ ಎಡನೀರು ಕಿರಿಯ ಶ್ರೀಗಳಿಗೆ ಯೋಗಪಟ್ಟ ಪ್ರದಾನಿಸಿ “ಸಚ್ಚಿದಾನಂದ ಭಾರತಿ” ನಾಮಕರಣ ಮಾಡಿದರು.
ಸನ್ಯಾಸ ಸ್ವೀಕಾರದ ಬಳಿಕ ಸಚ್ಚಿದಾನಂದ ಭಾರತೀ ಶ್ರೀಗಳು ಕಂಚಿ ಶ್ರೀ ಮಠದ ಅಧಿಷ್ಠಾನ ದರ್ಶನ ಮತ್ತು ದೇವಿ ಕಾಮಾಕ್ಷಿ ದರ್ಶನವನ್ನು ಮಾಡಿ ಅನುಗ್ರಹ ಪಡೆದರು.
ಸ್ವಸ್ತಿ ಶ್ರೀ ಗತಶಾಲಿವಾಹನ ಶಕವರ್ಷ 1942 ಕೊಲಂಬವರ್ಷ 1196 ಶಾರ್ವರಿನಾಮ ಸಂವತ್ಸರದ ದಕ್ಷಿಣಾಯನ ಶರತ್ ಋತು ನಿಜ ಆಶ್ವಯುಜಯುಕ್ತ ತುಲಾಮಾಸ 9ನೇ ದಿನ ಶುಕ್ಲಪಕ್ಷ ದಶಮಿ 10.30 ರ ಧನುರ್ಲಗ್ನದಲ್ಲಿ ತೋಟಕಾಚಾರ್ಯ ಪರಂಪರೆಯ ಎಡನೀರುಮಠದ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತಿ ಎಂಬ ಅಭಿನಾಮದೊಂದಿಗೆ ಪೀಠಾಧಿಕಾರಿಯಾಗಿ ಪದಗ್ರಹಣ ಮಾಡಿದ್ದಾರೆ (26-10-2020) ಎಂದು ಘೋಷಿಸಲಾಯಿತು.

ಎಡನೀರು ಪುರ ಪ್ರವೇಶ, ಪೀಠರೋಹಣ :

ಅ.27 ರಂದು ರಾಮಾಯಣ ಪಾರಾಯಣ ಮಂಗಳದೊಂದಿಗೆ ಬಳಿಕ ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ನೂತನ ಯತಿಗಳಾದ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳವರು ಎಡನೀರಿನ “ಪುರಪ್ರವೇಶ” ಮಾಡಲಿದ್ದಾರೆ.
ಅಕ್ಟೊಬರ್.28 ರಂದು ಎಡನೀರು ಮಠದಲ್ಲಿ ಪಟ್ಟಾಭಿಷೇಕವಾಗಿ ದೇವತಾರ್ಚನೆ ಅಪ್ರತಿ ರಥ ಶಾಂತಿ ಹೋಮದೊಂದಿಗೆ ಕಲಶೋದ್ವಾಸನ ಮಾಡಿ ಅಷ್ಟೋತ್ತರ ನಾರಿಕೇಳ ಗಣಪತಿ ಹವನ, ನವಚಂಡೀ ಯಾಗ ಸಂಪನ್ನಗೊಳಿಸಿ ಪೀಠಾರೋಹಣ ಶಾಸ್ತ್ರೋಕ್ತವಾಗಿ ನೆರವೇರಲಿದೆ.

ವರದಿ ಕೃಪೆ: ಕುಮಾರ ಸುಬ್ರಹ್ಮಣ್ಯ ಮುಳಿಯಾಲ.