ಹೊಸದಿಲ್ಲಿ: ಆರೋಗ್ಯ ಸೇತು ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅತ್ಯಂತ ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಡ್ ಕಾಲದಲ್ಲಿ ಹೆಚ್ಚು ಬಳಕೆಯಾದ ಆರೋಗ್ಯ ಸೇತು ಆಯಪ್ ಅಭಿವೃದ್ದಿಪಡಿಸಿದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜೊತೆ ಸೇರಿಕೊಂಡು ಆರೋಗ್ಯ ಸೇತು ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಅತ್ಯಂತ ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ವರದಿ ನೀಡಿದೆ.
ಆಯಪ್ ಅಭಿವೃದ್ಧಿಪಡಿಸಿದ್ದು ಯಾರು, ಅದರ ಕಡತಗಳು ಎಲ್ಲಿವೆ, ಆಯಪ್ ಅನುಮತಿ ವಿವರಗಳು, ಒಳಗೊಂಡಿರುವ ಕಂಪನಿಗಳು, ವ್ಯಕ್ತಿಗಳು, ಸರ್ಕಾರಿ ಇಲಾಖೆಗಳ ಬಗ್ಗೆ ಮಾಹಿತಿ ಕೋರಿ ಆರ್‌ಟಿಐನಡಿ ಸೌರವ್ ದಾಸ್ ಎಂಬವರು ಅರ್ಜಿ ಸಲ್ಲಿಸಿದ್ದರು.
ಆದರೆ, ಮಾಹಿತಿ ನೀಡಲು ಸಂಬಂಧಪಟ್ಟ ಪ್ರಾಧಿಕಾರ ನಿರಾಕರಿಸಿತ್ತು. ಇದರಿಂದ ಕೆಂಡಾಮಂಡಲವಾದ ರಾಷ್ಟ್ರೀಯ ಮಾಹಿತಿ ಆಯೋಗ, ಯಾವುದೇ ಪ್ರಾಧಿಕಾರ ಮಾಹಿತಿ ನೀಡದೇ ಸತಾಯಿಸುವುದನ್ನು ಒಪ್ಪಲಾಗದು. ನ.24ರಂದು ಸಂಬಂಧಪಟ್ಟ ಇಲಾಖೆ ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದೆ.