ಪುತ್ತೂರು : ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಮಧುಶ್ರೀ(26) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅವಿವಾಹಿತ ಯುವತಿ. ನಿನ್ನೆ ಮಧ್ಯಾಹ್ನ ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿವಾಹಿತ ಹಾಗೂ ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೈರಿಯಲ್ಲಿ ಬರೆದುಕೊಂಡಿರುವ ಅಧಾರದಲ್ಲಿ ಹಾಗೂ ಆಕೆಯ ಮಾವ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡ ಎಂಬವರ ಪುತ್ರಿ ಮಧುಶ್ರೀ, ಕಳೆದ ನಾಲ್ಕು ವರ್ಷದಿಂದ ಪುತ್ತೂರಿನ ಖಾಸಗಿ ಅಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದರು. ನಿನ್ನೆ ಮಧ್ಯಾಹ್ನ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ವಿವಾಹಿತನ ಕಿರುಕುಳದಿಂದ ಆತ್ಮಹತ್ಯೆ
ಈಕೆಯ ಆತ್ಮಹತ್ಯೆಗೆ ದೇವಿಕಿರಣ್ ಎಂಬ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮಧುಶ್ರೀ ತನ್ನ ಬ್ಯಾಗ್ ನಲ್ಲಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಾನು ಹಾಗೂ ಸಂಪಾಜೆಯ ದೇವಿಕಿರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಕಳೆದ ಜೂನ್ ನಲ್ಲಿ ಆತನಿಗೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದ್ದಂತೆ ಒತ್ತಾಯ ಮಾಡುತ್ತಿದ್ದ. ಮದುವೆಗೆ ಪ್ರಯತ್ನಿಸಿದರೆ ನನಗೂ ನಿನಗೂ ಸಂಬಂಧ ಇದೆ ಎಂದು ಯುವಕನಿಗೆ ತಿಳಿಸಿ ಮದುವೆ ತಪ್ಪಿಸುವುದಾಗಿ ಬೆದರಿಸಿದ್ದಾನೆ. ಅಲ್ಲದೇ ಒಂದು ವೇಳೆ ಮದುವೆಯಾದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಆತನ ಕಿರುಕುಳದ ಬಗ್ಗೆ ಮಧುಶ್ರೀ ಮನೆಯವರ ಬಳಿ ಕೂಡ ಹೇಳಿಕೊಂಡಿದ್ದರು ಎನ್ನಲಾಗಿದೆ. ನಿನ್ನೆ ಕೂಡ ಅಜ್ಜಿ ಮನೆಯಲ್ಲಿ ಈ ವಿಚಾರ ತಿಳಿಸಿದ್ದು ಅವರು ಸಮಾಧಾನ ಪಡಿಸಿದ್ದರು ಎಂದು ತಿಳಿದುಬಂದಿದೆ.
ಇನ್ನು ಮಧುಶ್ರೀ ಆತ್ಮಹತ್ಯೆಗೆ ದೇವಿಕಿರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀಯವರ ಮಾವ ವಿಠಲ್ ಗೌಡ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.