ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಕೈ ಬಿಟ್ಟ ರಾಜ್ಯ ಸರ್ಕಾರ..! ; ನೂತನ ಅಭಿವೃದ್ಧಿ ಸಮಿತಿ ರಚನೆ – ಐವರಿಗೆ ಜವಾಬ್ದಾರಿ – ಕಹಳೆ ನ್ಯೂಸ್
ಮಂಗಳೂರು: ಇಷ್ಟು ವರ್ಷಗಳ ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನ ಸರ್ಕಾರ ಆಯ್ಕೆ ಮಾಡುತ್ತಿತ್ತು. ಆದರೆ ಈ ಬಾರಿ ವ್ಯವಸ್ಥಾಪನಾ ಸಮಿತಿ ಆಯ್ಕೆ ಕೈ ಬಿಟ್ಟ ಸರ್ಕಾರ, ನೂತನ ಅಭಿವೃದ್ಧಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ಶ್ರೀಮಂತ ದೇಗುಲದ ವ್ಯವಸ್ಥಾಪನಾ ಸಮಿತಿಗೆ ಸೇರುವ ಕನಸು ಕಂಡಿದ್ದವರಿಗೆ ನಿರಾಶೆಯಾಗಿದೆ.
ಇನ್ನು ಸರ್ಕಾರದ ಈ ನಡೆಯ ಹಿಂದೆ ಪ್ರಾಧಿಕಾರ ರಚಿಸೋ ಉದ್ದೇಶವಿದ್ದು, ಅದರ ಪೂರ್ವಭಾವಿಯಾಗಿ ಸರ್ಕಾರವೇ ಆಯ್ಕೆ ಮಾಡಿದ ಜನರನ್ನು ಅಭಿವೃದ್ಧಿ ಸಮಿತಿಗೆ ಸದಸ್ಯರನ್ನಾಗಿ ಮಾಡಲಾಗಿದೆ. ಕುಕ್ಕೆಯ ಕಾರ್ಯನಿರ್ವಾಹಣಾಧಿಕಾರಿ ಸೇರಿ ಆರು ಜನರ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಪಿ.ಜಿ.ಎಸ್.ಪ್ರಸಾದ್, ಕೃಷ್ಣ ಶೆಟ್ಟಿ ಕಡಬ, ಪ್ರಸನ್ನ, ಎಸ್.ಮೋಹನ್ ರಾಮ್, ವನಜಾ ಭಟ್ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಸಮಿತಿ ರಚಿಸಿ ಆದೇಶ ಮಾಡಲಾಗಿದೆ. ವ್ಯವಸ್ಥಾಪನಾ ಸಮಿತಿಗೆ ಪೂರಕವಾಗಿ ಕೆಲಸ ಮಾಡಬೇಕು, ಕ್ಷೇತ್ರದ ಆಂತರಿಕ ವಿಚಾರದಲ್ಲಿ ಕೈಹಾಕದಂತೆ ಸಮಿತಿಗೆ ಸೂಚನೆ ನೀಡಲಾಗಿದೆ. ಭವಿಷ್ಯದಲ್ಲಿ ಕುಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ಚಿಂತನೆ ನಡೆಸಿದ್ದು, ಹೀಗಾಗಿ ಮೂರು ವರ್ಷಗಳ ಅವಧಿಗೆ ಅಭಿವೃದ್ಧಿ ಸಮಿತಿ ರಚನೆ ಮಾಡಲಾಗಿದೆ.