ಕೆವಾಡಿಯಾ:ಡೆಡ್ಲಿ ಕೊರೊನಾ ಪಿಡುಗಿನ ವಿರುದ್ಧ ಭಾರತವು ಧೃತಿಗೆಡದೇ ದಿಟ್ಟ ಹೋರಾಟ ನಡೆಸುತ್ತಿದ್ದು , ಈ ಹೆಮ್ಮಾರಿಯನ್ನು ನಾವು ಮಣಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿನ ಜೀವ ನದಿ ನರ್ಮದಾ ತಟದಲ್ಲಿ ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ್ಬಾಯಿ ಪಟೇಲ್ ಅವರ ಪುತ್ಥಳಿ (ಏಕತಾ ಪ್ರತಿಮೆ)ಗೆ ಇಂದು ರಾಷ್ಟ್ರೀಯ ಏಕತಾ ದಿನಾಚರಣೆ (ಪಟೇಲರ 145ನೇ ಜನ್ಮದಿನ) ಪ್ರಯುಕ್ತ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ವಿಶ್ವದ ಅನೇಕ ದೇಶಗಳು ಕೋವಿಡ್ -19 ಪಿಡುಗಿಗೆ ಹೆದರಿ ಸಂಕಷ್ಟಕ್ಕೆ ಸಿಲುಕಿವೆ. ಆದರೆ ನಾವು ಈ ಪಿಡುಗಿನ ವಿರುದ್ಧ ಧೈರ್ಯವಾಗಿ ಸೆಣಸುತ್ತಿದ್ದೇವೆ. ಈ ಹೆಮ್ಮಾರಿಯನ್ನು ಶೀಘ್ರದಲ್ಲೇ ನಿಗ್ರಹಿಸುತ್ತೇವೆ ಎಂದು ಮೋದಿ ಹೇಳಿದರು. ಕಳೆದ ವರ್ಷ ನಮಗೆ ಈ ಮಹಾಮಾರಿ ವಿಶ್ವದ ಮೇಲೆ ದಾಳಿ ಮಾಡಿ ಬಾರೀ ಸಂಕಷ್ಟ ತಂದೊಡ್ಡಲಿದೆ ಎಂಬುದು ತಿಳಿದಿರಲಿಲ್ಲ.
ಈ ವೈರಸ್ ಹಾವಳಿಗೆ ಸಿಲುಕಿರುವ ಅನೇಕ ರಾಷ್ಟ್ರಗಳು ಹೆದರಿಕೆಯಿಂದ ಹೋರಾಡುತ್ತಿವೆ. ಆದರೆ ನಾವು ಸಂಘಟಿತ ಮತ್ತು ಇಚ್ಚಾಶಕ್ತಿಯ ಹೋರಾಟ ನಡೆಸುತ್ತಿದ್ದೇವೆ ಎಂದು ಮೋದಿ ಹೇಳಿದರು. ನಾವು ಪೀಡೆಗೆ ಹೆದರಿಲ್ಲ. ಬದಲಿಗೆ ದಿಟ್ಟ ಹೋರಾಟ ನಡೆಸುತ್ತಿದ್ದೇನೆ. ಈ ಪಿಡುಗಿನ ವಿರುದ್ಧ ನಾವು ಖಂಡಿತ ಜಯ ಸಾಧಿಸುತ್ತೇವೆ ಎಂದು ಪ್ರಧಾನಿ ತಿಳಿಸಿದರು